ಮೈಸೂರು: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 5 ದಿನಗಳಲ್ಲಿ ಎರಡು ಹುಲಿಗಳು ಬಲಿಯಾಗಿವೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲೂಕಿನ ಗುಂಡತ್ತೂರು ಹಾಡಿಯ ತೋಟದಲ್ಲಿ ಸೆರೆ ಹಿಡಿದಿದ್ದ ಹುಲಿ ಇಂದು ಸಾವನ್ನಪ್ಪಿದೆ.
ಇಲ್ಲಿನ ರಮೇಶ್ ಎಂಬವರ ತೋಟದಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಹುಲಿಗೆ ಎರಡಕ್ಕಿಂತ ಹೆಚ್ಚು ಬಾರಿ ಅರವಳಿಕೆ ಮದ್ದು ನೀಡಿದ್ದಾರೆ. ಇದ್ರಿಂದ ಅರವಳಿಕೆ ನೀಡಿದ ಸ್ವಲ್ಪ ಹೊತ್ತಿಗೆ ಜ್ಞಾನತಪ್ಪಿದ್ದ ಹುಲಿ, ಅರಣ್ಯ ಇಲಾಖೆ ಕಚೇರಿಗೆ ತರುವಾಗ ಸಾವನ್ನಪ್ಪಿದೆ. ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಅರವಳಿಕೆ ಔಷಧಿ ನೀಡಿದ್ದೇ ಹುಲಿ ಸಾವಿಗೆ ಕಾರಣ ಎನ್ನಲಾಗಿದೆ. ಇದೇ ರೀತಿ ಜನವರಿ 12 ರಂದು ಬಂಡೀಪುರದ ಮಲೆಯೂರು ಅರಣ್ಯ ವಲಯದಲ್ಲಿ 8 ವರ್ಷದ ಗಂಡು ಹುಲಿಯನ್ನ ಸೆರೆ ಹಿಡಿಯಲಾಗಿತ್ತು. ಸೆರೆಹಿಡಿದ ತಕ್ಷಣ ಬನ್ನೇರುಘಟ್ಟಕ್ಕೆ ರವಾನಿಸಿದ್ರಿಂದ ತೀವ್ರ ಅಸ್ವಸ್ಥವಾಗಿದ್ದ ಹುಲಿ ಬನ್ನೇರುಘಟ್ಟದಲ್ಲಿ ಸಾವನ್ನಪ್ಪಿತ್ತು. ಇದೂ ಸಹ ಅರವಳಿಕೆ ಮದ್ದು ಹೆಚ್ಚಾಗಿ ನೀಡಿದ್ದರಿಂದ ಸಾವನ್ನಪ್ಪಿದೆ ಎನ್ನಲಾಗಿದೆ.