ಮೈಸೂರು: ಚೆಕ್ಕೆರೆ ಹಾಡಿಯ ಮಹಿಳೆ ತನ್ನ ಎರಡು ವರ್ಷದ ಮಗು ಎದೆಹಾಲಿಗಾಗಿ ಅಳುತ್ತಿದ್ದಾಗ ಕೋಪಗೊಂಡ ಈಕೆ ಮಗುವನ್ನು ಬೆಂಕಿಗೆಸೆದಿದ್ದಾಳೆ.
ಕುಡಿದ ಅಮಲಿನಲ್ಲಿ ಆದಿವಾಸಿ ಮಹಿಳೆಯೋರ್ವಳು ಹೆತ್ತ ಮಗುವಿನ ಮೇಲೆ ಕಠೋರವಾಗಿ ವರ್ತಿಸಿರುವ ಘಟನೆ ಹೆಚ್.ಡಿ ಕೋಟೆ ತಾಲೂಕಿನ ಹಣ್ಣೂರು ಸಮೀಪದ ಚಿಕ್ಕೆರೆ ಹಾಡಿಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕುಡಿತದ ಚಟಕ್ಕೆ ದಾಸಿಯಾಗಿರುವ ಆದಿವಾಸಿ ಮಹಿಳೆ ಸುಧಾ ತನ್ನ ಗಂಡು ಮಗುವನ್ನು ಬೆಂಕಿಗೆ ಎಸೆದು ವಿಕೃತಿ ಮೆರೆದಿದ್ದು, ತಕ್ಷಣ ಅವಳೇ ಮಗುವನ್ನ ರಕ್ಷಿಸಿದ್ದಾಳೆ. ಘಟನೆಯಲ್ಲಿ ಮಗುವಿನ ಮುಖ ಹಾಗೂ ತಲೆಯ ಭಾಗ ಮತ್ತು ಮೈ-ಕೈ ಸುಟ್ಟಿದೆ. ಇನ್ನು ರಕ್ಷಿಸುವ ತವಕದಲ್ಲಿ ತಾಯಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
ಘಟನೆ ನಂತರ ಮಗುವನ್ನ ಆಸ್ಪತ್ರೆಗೆ ಕರೆದೊಯ್ಯದೇ ಹಾಡಿಯಲ್ಲೇ ಮಲಗಿಸಿಕೊಂಡಿದ್ದನ್ನು ಕಂಡ ಅಂಗನವಾಡಿ ಕಾರ್ಯಕರ್ತೆಯರು ನಿನ್ನೆ ಸಂಜೆ ಹೆಚ್.ಡಿ ಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಇಬ್ಬರಿಗೂ ಚಿಕಿತ್ಸೆ ಕೊಡಿಸಿದ್ದಾರೆ. ಆದಿವಾಸಿಗಳಿಗಾಗಿಯೇ ಕಾರ್ಯನಿರ್ವಹಿಸುತ್ತಿರುವ ಸರಗೂರಿನ ಸ್ವಾಮಿ ವಿವೇಕಾನಂದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಇದೀಗ ಮಗು ಮತ್ತು ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.