ಮೈಸೂರು: ಗಂಡನ ವರದಕ್ಷಿಣೆ ಕಿರುಕುಳ ತಾಳಲಾರದೆ ಹೆಂಡತಿ ನೇಣಿಗೆ ಶರಣಾಗಿರುವ ಘಟನೆ ಜಯನಗರದಲ್ಲಿ ನಡೆದಿದ್ದು, ಗಂಡನೇ ಕೊಲೆ ಮಾಡಿದ್ದಾನೆ ಎಂದು ಹೆಂಡತಿ ಮನೆಯವರು ದೂರು ದಾಖಲಿಸಿರುವ ಘಟನೆ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೀಗೆ ನೇಣಿಗೆ ಶರಣಾದ ಮಹಿಳೆ ದಿವ್ಯಾ(29). ಈಕೆ ಕಳೆದ 9 ವರ್ಷಗಳ ಹಿಂದೆ ಪಕ್ಕದ ಬೀದಿಯ ರಂಗಸ್ವಾಮಿ ಎಂಬುವನೊಂದಿಗೆ ವಿವಾಹವಾಗಿದ್ದು, ಮೃತಳಿಗೆ 6 ವರ್ಷದ ಗಂಡು ಮಗ ಸಹ ಇದೆ. ಆದರೆ ಮದುವೆಯಾಗಿ ಚೊಚ್ಚಲ ಹೆರಿಗೆಗೆ ತವರು ಮನೆಗೆ ಬಂದ ಹೆಂಡತಿಯನ್ನ ವಾಪಸ್ಸು ಮನೆಗೆ ಕರೆದುಕೊಂಡು ಹೋಗದೆ ಗಂಡ ಹಟ ಮಾಡಿದ್ದು, ಕೊನೆಗೆ ಪಂಚಾಯಿತಿ ಮಾಡಿ ಗಂಡನ ಮನೆಗೆ ಕಳುಹಿಸಿದಳು. ಆದರೆ ಗಂಡನ ಹಿಂಸೆ ತಾಳಲಾರದೆ ಪುನಹ ತವರು ಮನೆಗೆ ಸೇರಿದ ದಿವ್ಯಾ, ಆರು ವರ್ಷಗಳ ಕಾಲ ತವರು ಮನೆಯಲ್ಲೇ ಇದ್ದರು.
ಆದರೆ ಕಳೆದ 2 ತಿಂಗಳ ಹಿಂದೆ ಮನೆಗೆ ಬಂದ ಗಂಡ ನಿಮ್ಮ ಮಗಳನ್ನು ಚೆನ್ನಾಗಿ ನೋಡಿ ಕೊಳ್ಳುತ್ತೇನೆ ಎಂದು ಕರೆದುಕೊಂಡು ಹೋಗಿದ್ದು, ನಿನ್ನೆ ಮನೆಯಲ್ಲಿ ಗಲಾಟೆ ನಡೆದಿದ್ದು ಆ ಸಂಧರ್ಭದಲ್ಲಿ ಹೊಡೆದು ನೇಣು ಹಾಕಿದ್ದಾನೆ ಎಂದು ದಿವ್ಯಾ ತಮ್ಮ ಗುರು ಆರೋಪಿಸಿದ್ದಾನೆ.
ಠಾಣೆಗೆ ಶರಣಾದ ಗಂಡ: ಹೆಂಡತಿ ನೇಣು ಹಾಕಿಕೊಂಡಿದ್ದಾಳೆ, ನನ್ನದೇನು ತಪ್ಪಿಲ್ಲ ಎಂದು ಸ್ವತಹ ಗಂಡ ರಂಗಸ್ವಾಮಿ ಅಶೋಕ ಪುರಂ ಠಾಣಾ ಪೊಲೀಸರಿಗೆ ಹೋಗಿ ಸ್ವತಃ ಶರಣಾಗಿದ್ದು, ಈ ಸಂಬಂಧ ಮೃತರ ತಮ್ಮ ಗುರು, ನನ್ನ ಅಕ್ಕನನ್ನು ಗಂಡ ಹಾಗೂ ಅವರ ಮೂರು ಜನ ಸಹೋದರಿಯರು ಹೊಡೆದು ನೇಣು ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಈ ಸಂಬಂಧ ತನಿಖೆ ಕೈಗೊಂಡಿರುವ ಅಶೋಕ ಪುರಂ ಠಾಣಾ ಪೊಲೀಸರು ಗಂಡನ ತೀವ್ರ ವಿಚಾರಣೆಗೊಳಪಡಿಸಿದ್ದು ತಲೆ ಮರಸಿಕೊಂಡಿರುವ ಸಹೋದರಿಯರ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.