ಮೈಸೂರು: ಇದುವರೆಗೆ ದಸರಾ ಸಮಯದಲ್ಲಿ ಎರಡೋ ಮೂರೋ ತಿಂಗಳ ಕಾಲ ತೆರೆಯಲಾಗುತ್ತಿದ್ದ ದಸರಾ ವಸ್ತುಪ್ರದರ್ಶನವನ್ನು ಇನ್ಮುಂದೆ ವರ್ಷಪೂ ತೆರೆದಿಡುವಂತೆ ಮಾಡುವ ಕಾರ್ಯಕ್ಕೆ ವಸ್ತು ಪ್ರದರ್ಶನ ಪ್ರಾಧಿಕಾರ ಮುಂದಾಗಿದೆ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ವಸ್ತು ಪ್ರದರ್ಶನವನ್ನು ಆರಂಭದಿಂದಲೂ ದಸರಾ ವೇಳೆ ಮಾತ್ರ ತೆರೆಯಲಾಗುತ್ತಿತ್ತು. ಆದರೆ ವರ್ಷದಿಂದ ವರ್ಷಕ್ಕೆ ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ವಸ್ತುಪ್ರದರ್ಶನವನ್ನು ಪ್ರಮುಖ ಪ್ರವಾಸಿ ತಾಣವನ್ನಾಗಿ ನಿರ್ಮಾಣ ಮಾಡುವುದಕ್ಕೆ ನಿರ್ಧರಿಸಿದ್ದು, ವರ್ಷ ಪೂರ್ತಿ ಪ್ರವಾಸಿಗರ ಅನುಕೂಲಕ್ಕೆ ತೆರೆದಿಡುವ ಚಿಂತನೆ ನಡೆಸಿದೆ. ಈ ಕುರಿತಂತೆ ಮಾಸ್ಟರ್ ಪ್ಲಾನ್ ಕೂಡ ಸಿದ್ಧಪಡಿಲಾಗಿದೆ ಎಂದು ಹೇಳಿದ್ದಾರೆ.
ಮಾಸ್ಟರ್ ಪ್ಲಾನ್ನಲ್ಲಿ ಪ್ರಸ್ತುತ ಮಳಿಗೆಗಳ ಮೇಲ್ಛಾವಣಿ ಕಬ್ಬಿಣದ ಶೀಟ್ ಗಳಿಂದ ನಿರ್ಮಿಸಲಾಗಿದ್ದು, ಶಾಶ್ವತ ಆರ್ ಸಿಸಿ ಮೇಲ್ಛಾವಣಿ ನಿರ್ಮಿಸಲಾಗುತ್ತದೆ, ಶಾಶ್ವತ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಅದರಲ್ಲಿ ಮಕ್ಕಳಿಗೆ ಆಟವಾಡುವುದಕ್ಕೆ ಪ್ರತ್ಯೇಕ ಕಿಡ್ಸ್ ಪಾರ್ಕ್ ನಿರ್ಮಾಣ ಹಾಗೂ ಆಹಾರ ಮಳಿಗೆಗಳ -ಫುಡ್ ಜೋನ್, ಹಾಗೂ ಸ್ನೋ ವರ್ಡ್ ನ್ನು ಪ್ರತ್ಯೇಕವಾಗಿ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು.
ಆವರಣದಲ್ಲಿ ಸಭೆ-ಸಮಾರಂಭಗಳನ್ನು ನಡೆಸುವುದಕ್ಕೆ ಮೀಟಿಂಗ್ ಹಾಲ್, ಕನ್ವೆನ್ಷನ್ ಸೆಂಟೆರ್, ಸೆಮಿನಾರ್ ಹಾಲ್, ಹಾಗೂ ವಾಹನ ದಟ್ಟಣೆ ತಡೆಯುವುದು ಹಾಗೂ ಸುಲಲಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದಕ್ಕೆ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡಲಾಗುವುದು. ವಸ್ತು ಪ್ರದರ್ಶನ ಆವರಣಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡುವುದಕ್ಕೆ ನಿರ್ದರಿಸಲಾಗಿದೆ, ಇದನ್ನು ಖಾಸಗಿ ಸಂಸ್ಥೆಯೊಂದು ನಿರ್ಮಿಸಲಿದ್ದು ಮುಂದಿನ 25 ವರ್ಷಗಳ ಕಾಲ ವಸ್ತು ಪ್ರದರ್ಶನಕ್ಕೆ ಶೇ.50 ರಷ್ಟು ರಿಯಾಯಿತಿ ದರದಲ್ಲಿ ವಿದ್ಯುತ್ ಪೂರೈಕೆ ಮಾಡಲಿದೆ. 25 ವರ್ಷ ಕಳೆದ ಬಳಿಕ ಸೋಲಾರ್ ಪ್ಲಾಂಟ್ ಸಂಪೂರ್ಣ ವಸ್ತು ಪ್ರದರ್ಶನ ಪ್ರಾಧಿಕಾರದ ಕೈ ಸೇರಲಿದೆ ಎಂದರು.
ಸುಮಾರು 80 ಎಕರೆ ಪ್ರದೇಶದಲ್ಲಿರುವ ವಸ್ತು ಪ್ರದರ್ಶನದಲ್ಲಿ ಮಾಸ್ಟರ್ ಪ್ಲಾನ್ನಂತೆಯೇ ಕಾಮಗಾರಿ ಕೈಗೊಳ್ಳುವುದಕ್ಕೆ ಅಂದಾಜು 120 ಕೋಟಿ ತಗುಲಲಿದೆ. ಈ ಕಾಮಗಾರಿಗಳ ಕುರಿತು ಪ್ರವಾಸೋಧ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸಭೆ ನಡೆಸಲಾಗಿದೆ, ಸಚಿವರು ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭ ವಸ್ತು ಪ್ರದರ್ಶನದ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಎನ್.ಎಂ.ಶಶಿಕುಮಾರ್ ಇದ್ದರು.