ಮೈಸೂರು: ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿಲ್ಲ ಕೊಲೆ ಮಾಡಲಾಗಿದೆ ಎಂದು ಸತ್ತ ಮೂರು ತಿಂಗಳ ನಂತರ ತಾಯಿ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತನಿಖೆ ನಡೆಸಿ ನ್ಯಾಯ ದೊರಕಿಸಿಕೊಡುವಂತೆ ದೂರು ನೀಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಬನ್ನೂರು ಗ್ರಾಮದ ಮಂಗಳಮ್ಮ ಎಂಬುವವರ ಮಗ ಶಶಿಧರ್ ಎಂಬುವನು ಸೆಪ್ಟೆಂಬರ್ 8 ರಂದು ಮನೆಯಿಂದ ಯಾವುದೋ ಫೋನ್ ಕಾಲ್ ಬಂದಿದೆ ಎಂದು ಹೊರಗೆ ಬಂದವ ಮೈಸೂರಿನ ಖಾಸಗಿ ಎಂಜಿನಿಯರಿಂಗ್ ಕಾಲೇಜು ಹತ್ತಿರ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸ್ನೇಹಿತರು ಯಾವುದೇ ದೂರು ನೀಡದೆ ಮರಣೋತ್ತರ ಪರೀಕ್ಷೆ ನಡೆಸದೆ, ಆತುರ ಆತುರವಾಗಿ ಗ್ರಾಮಕ್ಕೆ ತಂದು ಶವವನ್ನ ಸುಟ್ಟು ಹಾಕಿದ್ದಾರೆ.
ಆದರೆ ಇದು ಆತ್ಮಹತ್ಯೆ ಅಲ್ಲ ನನ್ನ ಮಗ ಅದೇ ಗ್ರಾಮದ ಎಂ.ಟೆಕ್ ವ್ಯಾಸಂಗ ಮಾಡುತ್ತಿರುವ ಅಕ್ಷತಾ ಎಂಬ ಯುವತಿಯನ್ನ ನಾಲ್ಕು ವರ್ಷದಿಂದ ಗುಪ್ತವಾಗಿ ಪ್ರೀತಿಸುತ್ತಿದ್ದು, ಅವರ ಮನೆಯವರೆ ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಶಂಕೆ ಇದ್ದು ತನಿಖೆ ನಡೆಸಿ ಸತ್ಯಾಂಶ ತಿಳಿಸಿ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರವಿ.ಡಿ.ಚೆನ್ನಣ್ಣನವರ್ ಹಾಗೂ ನಗರ ಕಾನೂನು ಸುವ್ಯವಸ್ಥೆ ಪೊಲೀಸ್ ಡಿಸಿಪಿ ಡಾ.ಹೆಚ್.ಟಿ ಶೇಖರ್ ಗೆ ತಾಯಿ ಮಂಗಳಮ್ಮ ದೂರು ನೀಡಿದ್ದಾರೆ.
ಫೇಸ್ ಬುಕ್ ತಂದ ಆಪತ್ತು:
ವೃತ್ತಿಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಶಶಿಧರ್, ನಾಲ್ಕು ವರ್ಷಗಳಿಂದ ಅದೇ ಗ್ರಾಮದ ಎಂ.ಟೆಕ್ ವ್ಯಾಸಂಗ ಮಾಡುತ್ತಿದ್ದ ಅಕ್ಷತಾಳನ್ನ ಪ್ರೀತಿಸುತ್ತಿದ್ದು ಅವಳೊಂದಿಗೆ ತಿರುಗಾಡಿದ ಫೋಟೋಗಳನ್ನ ಫೇಸ್ ಬುಕ್ ನಲ್ಲಿ ಹಾಕಿದ್ದು, ಇವರಿಬ್ಬರ ಪ್ರೀತಿ ಹುಡುಗಿಯ ಮನೆಯವರಿಗೆ ಗೊತ್ತಾಗಿದ್ದು, ಇದರಿಂದ ಹುಡುಗಿಯನ್ನ ಕಾಲೇಜಿಗೆ ಕಳುಹಿಸುವುದನ್ನ ಅವರ ಮನೆಯವರು ನಿಲ್ಲಿಸಿದರು. ಈ ನಡುವೆ ಒಂದು ದಿನ ತುರ್ತಾಗಿ ಬರಬೇಕೆಂದು ಫೋನ್ ಬಂದಿದೆ. ಅಂದು ಹೊರಗೆ ಹೋದವ ಹೆಣವಾದ. ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ತಂಗಿ ಸ್ಪಂದನ ಆರೋಪಿಸಿದ್ದು ಅಂತ್ಯಕ್ರಿಯೆ ಆದ ನಂತರ ಅಣ್ಣನ ಮೊಬೈಲ್ ನನಗೆ ಕೊಟ್ಟಿದ್ದು ಅದರಲ್ಲಿ ಇದ್ದ ಫೋಟೋ, ನಂಬರ್ ಗಳು ಹಾಗೂ ಮೆಸೇಜ್ ಗಳು ಡಿಲೀಟ್ ಆಗಿದ್ದು ಇದರಿಂದ ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ತಂಗಿ ಸ್ಪಂದನ ಸಂಶಯ ವ್ಯಕ್ತ ಪಡಿಸುತ್ತಾಳೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನಜರ್ ಬಾದ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.