ಸುತ್ತೂರು: ಬರದ ಹಿನ್ನಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಕಾಣಿಸಿಕೊಂಡಿದ್ದು ರೈತರಿಗೆ ಮೇವು ಒದಗಿಸುವುದೇ ಚಿಂತೆಯಾಗಿದ್ದು, ಇದನ್ನು ತಪ್ಪಿಸುವ ಸಲುವಾಗಿ ನಂಜನಗೂಡು ತಾಲೂಕು ಕೌಲಂದೆಯಲ್ಲಿ ಮೇವುನಿಧಿ ಕೇಂದ್ರವನ್ನು ಆರಂಭಿಸಲಾಗಿದೆ.
ಈ ಮೇವು ನಿಧಿ ಕೇಂದ್ರಕ್ಕೆ ರೈತರ ಹಸುಗಳಿಗೆ ಮೇವು ವಿತರಿಸುವ ಮೂಲಕ ಸಂಸದ ಆರ್. ಧ್ರುವನಾರಾಯಣ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಮ್ಮ ರೈತರು ಪ್ರಸಕ್ತ ವರ್ಷ ತೀವ್ರ ಬರಗಾಲ ಬಂದಿದ್ದರಿಂದ ಕಂಗಾಲಾಗಿದ್ದು, ಜಾನುವಾರುಗಳಿಗೆ ಮೇವು ನೀಡುವುದೇ ಕಷ್ಟವಾಗಿದೆ. ಇದನ್ನು ಪರಿಹರಿಸುವ ಸಲುವಾಗಿ ಮೇವು ನಿಧಿಕೇಂದ್ರ ತೆರೆಯಲಾಗಿದ್ದು, ಸದುಪಯೋಗಿಸಿಕೊಳ್ಳುವಂತೆ ಹೇಳಿದರಲ್ಲದೆ, ಮೇವು ನಿಧಿ ಕೇಂದ್ರ್ರದಲ್ಲಿ ಈಗಾಗಲೇ 33 ರಿಂದ 40 ಟನ್ ಹುಲ್ಲು ಶೇಖರಣೆಯಾಗಿದ್ದು, ಈಗಾಗಲೇ 75 ಜನ ರೈತರಿಗೆ ಮೇವು ವಿತರಿಸಲಾಗಿದೆ ಎಂದು ತಿಳಿಸಿದರು.
ತಾಲೂಕು ಸಹಾಯಕ ಪಶು ನಿರ್ದೇಶಕರಾದ ಮಂಜುನಾಥ್ ಮಾತನಾಡಿ ಮೇವು ನಿಧಿ ಕೇಂದ್ರದಲ್ಲಿ 500 ಟನ್ ಮೇವು ಹುಲ್ಲು ಬೇಡಿಕೆ ಇದ್ದರೂ ಯಾವ ಕೊರತೆ ಬಾರದಂತೆ ವಿತರಿಸುತ್ತೇವೆ. ಮುಂದಿನ ಮೇವಿನ ನಿಧಿ ಕೇಂದ್ರವನ್ನು ತಾಲೂಕಿನ ಕಸುವಿನಹಳ್ಳಿಯಲ್ಲಿ ಪ್ರಾರಂಭಮಾಡುವುದಾಗಿ ತಿಳಿಸಿದರು.
ತಾಲೂಕು ದಂಡಾಧಿಕಾರಿ ದಯಾನಂದ್, ಡಾ.ಮಂಜುನಾಥ್, ಜಿ.ಪಂ. ಸ್ಥಾಯಿ ಸಮಿತಿ ಸದಸ್ಯರಾದ ದಯಾನಂದ ಮೂರ್ತಿ, ದೇವೇಂಧ್ರ ಮತ್ತಿತರು ಇದ್ದರು.