ಮೈಸೂರು: ವಸ್ತುಪ್ರದರ್ಶನ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಕರ್ನಾಟಕ ವಾಸ್ತುಶಿಲ್ಪ ಕುರಿತ ಎರಡು ದಿನಗಳ ಕಾರ್ಯಾಗಾರವನ್ನು ಉಮಾಶ್ರೀ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿಶ್ವಮಟ್ಟದಲ್ಲಿ ಭಾರತದ ವಾಸ್ತುಶಿಲ್ಪಕ್ಕೆ ಬಹಳ ಪ್ರಾಮುಖ್ಯತೆ ಇದೆ.
ವಿದೇಶಿಗರು ನಮ್ಮ ಕಲೆ, ಸಂಸ್ಕೃತಿ, ಪರಂಪರೆಯನ್ನು ಅತ್ಯಂತ ಕುತೂಹಲ, ಆಸಕ್ತಿಯಿಂದ ನೋಡುತ್ತಾರೆ. ನಮ್ಮ ಪೂರ್ವಿಕರು ನಿರ್ಮಿಸಿರುವ ಶಿಲ್ಪಗಳು, ಕಟ್ಟಡಗಳು ಎಷ್ಟೇ ವರ್ಷಗಳು ಉರುಳಿದರೂ ಕಳೆಗುಂದಿಲ್ಲ. ಆದರೆ, ನಮ್ಮಲ್ಲಿ ವಾಸ್ತುಶಿಲ್ಪದ ಬಗೆಗೆ ಪ್ರೀತಿಯೇ ಇಲ್ಲದಂತಾಗಿದ್ದು, ವಿಜ್ಞಾನದೊಂದಿಗೆ ವಾಸ್ತುಶಿಲ್ಪ ವಿಜ್ಞಾನದ ಅರಿವನ್ನೂ ಮೂಡಿಸಿ ಎತ್ತರಕ್ಕೆ ಏರಿಸುವ ಅಗತ್ಯತೆ ಇದೆ ಎಂದು ಹೇಳಿದರು.
ಇತಿಹಾಸ ಇಲ್ಲದೆ ಯಾವುದೇ ವಿಜ್ಞಾನ ಇಲ್ಲ. ವಿಜ್ಞಾನಕ್ಕೆ ತಳಹದಿಯ ಜ್ಞಾನವೇ ಇತಿಹಾಸ. ಶಿಲಾಯುಗದಿಂದ ಇಲ್ಲಿಯವರೆಗೂ ಮನುಷ್ಯ ಕಾಲ ಬದಲಾದಂತೆ ಹೊಸ ಹೊಸ ಸಂಶೋಧನೆಗಳ ಮೂಲಕ ನೂತನ ವಿಧಾನಗಳ ಕೊಡುಗೆ ನೀಡಿದ್ದಾನೆ. ಅಂದು ಯಾವ ತಂತ್ರಜ್ಞಾನ ಸೌಲಭ್ಯಗಳು ಇಲ್ಲದೇ ಇದ್ದರೂ ವಿಶ್ವವೇ ನಿಬ್ಬೆರಗುಗಣ್ಣಿನಿಂದ ಭಾರತದತ್ತ ತಿರುಗಿ ನೋಡುವಂತೆ ನಮ್ಮ ಪೂರ್ವಿಕರು ಮಾಡಿದ್ದಾರೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಹಂಪಿ ನಮ್ಮ ರಾಜ್ಯದಲ್ಲಿರುವುದು ಹೆಮ್ಮೆಯ ಸಂಗತಿಯಾಗಿದ್ದು ಕನ್ನಡಿಗರು ಗರ್ವಪಡಬಹುದು ಎಂದರು. ನಮ್ಮ ರಾಜ್ಯದಲ್ಲಿ ಎಂತಹ ವಿಜ್ಞಾನಿಗಳಿದ್ದರೂ, ಅವರ ಜ್ಞಾನದ ಪರಿಧಿ ಎಷ್ಟಿತ್ತು ಎಂಬುದು ಇಂತಹ ಅತ್ಯದ್ಭುತ ವಾಸ್ತುಶಿಲ್ಪಗಳಿಂದಲೇ ತಿಳಿಯುತ್ತದೆ ಎಂದು ಹೇಳಿದರು.
ಇಂದು ಅಭಿರುಚಿಗಳು ಕಳೆದುಹೋಗುತ್ತಿವೆ. ವಿದ್ಯಾರ್ಥಿಗಳ ಸಮೇತವಾಗಿ ಎಲ್ಲರೂ ಹಣದ ಹಿಂದೆ ಬಿದ್ದಿದ್ದಾರೆ. ವಿದ್ಯೆ ಇರುವೆಡೆ ಲಕ್ಷ್ಮಿ ನೆಲೆಸಿರುತ್ತಾಳೆ. ಹಣದ ವ್ಯಾಮೋಹಕ್ಕೆ ಬಲಿಯಾಗಿ ವಿದ್ಯಾಸರಸ್ವತಿಯನ್ನು ಕಡೆಗಣಿಸಿದರೆ ಲಕ್ಷ್ಮಿ ಒಲಿಯುವುದಿಲ್ಲ. ಹಾಗಾಗಿ ವಿದ್ಯಾರ್ಥಿಗಳು ವಾಸ್ತುಶಿಲ್ಪಕ್ಕೆ ರಾಜಮಹಾರಾಜರ ಕೊಡುಗೆಯನ್ನು ಅರ್ಥಮಾಡಿಕೊಂಡು ಅದನ್ನು ಮುನ್ನಡೆಸಬೇಕು. ಸಂಶೋಧನಾತ್ಮಕ, ಅಧ್ಯಯನಾತ್ಮಕ ಮನಸ್ಸನ್ನು ರೂಢಿಸಿಕೊಳ್ಳಬೇಕು. ಆಳವಾಗಿ ಅಧ್ಯಯನ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಆಗ ಯಶಸ್ಸಿನೊಂದಿಗೆ ಸಕಲ ಸಂಪತ್ತು ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಾಗಾರದಲ್ಲಿ ಧಾರವಾಡ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ.ಎಸ್.ವಿ.ಪಾಡಿಗಾರ್, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ.ಎಂ.ಎಸ್.ಕೃಷ್ಣಮೂರ್ತಿ, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ನಿರ್ದೇಶಕ ಡಾ.ಗವಿಸಿದ್ದಯ್ಯ, ಡಾ.ಆರ್.ಗೋಪಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.