ಮೈಸೂರು: ಸಚಿವ ಎಚ್.ಎಸ್. ಮಹದೇವಪ್ರಸಾದ್ ಅವರ ಅಕಾಲಿಕ ನಿಧನ ಸಿಎಂ ಸಿದ್ದರಾಮಯ್ಯ ಪಾಲಿಗಂತೂ ದೊಡ್ಡ ನಷ್ಟ. ಒಂದು ಕಡೆ ಆಪ್ತ ಸ್ನೇಹಿತನನ್ನು ಕಳೆದಕೊಂಡ ನೋವು, ಮತ್ತೊಂದು ಕಡೆ ಅವರ ಬತ್ತಳಿಕೆಯಲ್ಲಿದ್ದ ಪ್ರಬಲ ಲಿಂಗಾಯತ ಅಸ್ತ್ರ ದಿಢೀರನೆ ಕಣ್ಮರೆ ಆಗಿದ್ದು ಸಿಎಂಗೆ ರಾಜಕೀಯವಾಗಿ ದೊಡ್ಡ ನಷ್ಟ ತಂದಿದೆ. ಹಿರಿಯ ಮಗ ರಾಕೇಶ್ ಸಿದ್ದರಾಮಯ್ಯ ನಿಧನರಾಗುತ್ತಿದ್ದಂತೆ ತಕ್ಷಣವೇ ಆ ಸ್ಥಾನಕ್ಕೆ ರಾಜಕೀಯದ ಗಂಧವೇ ಗೊತ್ತಿಲ್ಲದ ತಮ್ಮ ಕಿರಿಯ ಮಗ ಡಾ. ಯತೀಂದ್ರರನ್ನು ತಂದು ಕೂರಿಸಿ ಪುತ್ರ ರಾಜಕೀಯ ಪರ್ವ ಮುಂದುವರಿಸಿದ್ದ ಸಿಎಂ, ಈಗ ಲಿಂಗಾಯಿತ ಅಸ್ತ್ರವಾಗಿದ್ದ ಮಹದೇವಪ್ರಸಾದ್ ಕಣ್ಮರೆ ಆಗುತ್ತಿದ್ದಂತೆ ಆ ಸ್ಥಾನಕ್ಕೆ ಮಾಜಿ ಸಚಿವ ವಿ. ಸೋಮಣ್ಣರನ್ನು ತಂದು ಕೂರಿಸಲು ಮುಂದಾಗಿದ್ದಾರೆ. ಈ ಮೂಲಕ ತಮ್ಮ ಬತ್ತಳಿಕೆಯಲ್ಲಿ ಲಿಂಗಾಯತ ನಾಯಕನನ್ನು ಇಟ್ಟುಕೊಳ್ಳಲು ಪ್ಲಾನ್ ಸಿದ್ಧಮಾಡಿದ್ದಾರೆ.
ಹಳೆ ಮೈಸೂರು ಭಾಗದ ಕಾಂಗ್ರೆಸ್ ನಲ್ಲಿ ಈಗ ಲಿಂಗಾಯತ ಸಮುದಾಯದ ನಾಯಕತ್ವವೇ ಇಲ್ಲದಂತಾಗಿದೆ. ಈ ಹಿಂದೆ ಕೆ.ಎಸ್. ನಾಗರತ್ನಮ್ಮ, ಎಂ. ರಾಜಶೇಖರಮೂರ್ತಿ, ಎಂ.ಎಸ್. ಗುರುಪಾದಸ್ವಾಮಿ, ಎಂ. ಮಹದೇವು ಕಾಂಗ್ರೆಸ್ ಪಾಲಿಗೆ ಲಿಂಗಾಯತರ ಶಕ್ತಿಯಾಗಿದ್ದರು. ಇವರ ನಂತರ ಈ ಸ್ಥಾನ ತುಂಬಿದವರು ಎಚ್.ಎಸ್. ಮಹದೇವಪ್ರಸಾದ್. ಆದರೆ ಈಗ ಅವರು ನಿಧನರಾಗುವ ಮೂಲಕ ಕಾಂಗ್ರೆಸ್ ಗೆ ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಸಮರ್ಥ ನಾಯಕ ಇಲ್ಲದಂತಾಗಿದೆ. ಇದು ಕಾಂಗ್ರೆಸ್ ಗೆ ಹಾಗೂ ವೈಯಕ್ತಿಕವಾಗಿ ಸಿಎಂ ಸಿದ್ದರಾಮಯ್ಯಗೆ ದೊಡ್ಡ ಕೊರತೆಯಾಗಿದೆ.
ಈಗ ಹೇಳಿ ಕೇಳಿ ಮಾಜಿ ಸಚಿವ ವಿ. ಸೋಮಣ್ಣ, ಬಿಜೆಪಿಯಲ್ಲಿ ಸೈಡ್ಲೈನ್ ಆಗಿದ್ದಾರೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದಿದ್ದ ವಿ.ಸೋಮಣ್ಣಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದ್ದ ಬಿ.ಎಸ್. ಯಡಿಯೂರಪ್ಪ ಈಗ ಸೋಮಣ್ಣ ಮುಖ ಕಂಡರೆ ಸಿಟ್ಟಿಗೇಳುತ್ತಾರೆ. ಇಷ್ಟರ ಮಟ್ಟಿಗೆ ಇವರ ಸ್ನೇಹ ಕೆಟ್ಟಿದೆ. ಹೀಗಾಗಿ, ಸೋಮಣ್ಣ ಬಿಜೆಪಿಯಲ್ಲಿ ಸೈಡ್ ಲೈನ್ ನಾಯಕ. ಅಲ್ಲಿ ಇರಲು ಆಗದೇ ಹೊರ ಬರಲೂ ಆಗದೆ ಸೋಮಣ್ಣ ಅತಂತ್ರ ಸ್ಥಿತಿಯಲ್ಲಿ ಇದ್ದದ್ದು ಸತ್ಯ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹೆಬ್ಬಾಗಿಲು ಸೋಮಣ್ಣಗೆ ತೆರೆದಿರುವುದು ಸೋಮಣ್ಣಗೆ ಖುಷಿ ತಂದಿದೆ. ಸೋಮಣ್ಣಗೆ ಬಿಜೆಪಿಯಲ್ಲಿ ಬೆಲೆ ಸಿಗುತ್ತಿಲ್ಲ ಎಂಬ ಕೊರಗು. ಕಾಂಗ್ರೆಸ್ ಗೆ ಹಳೆ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಲಿಂಗಾಯತರ ನಾಯಕ ಇಲ್ಲ ಎಂಬ ಕೊರಗು. ಈ ಎರಡು ಕೊರಗಿಗೆ ಒಂದೇ ಪರಿಹಾರ ಸೋಮಣ್ಣ ಮರಳಿ ಕಾಂಗ್ರೆಸ್ ಗೆ ಬರುವುದು ಎಂಬ ನಿರ್ಣಯಕ್ಕೆ ಇಬ್ಬರು ಬಂದಂತಿದೆ. ಇದರ ಫಲವೇ ಸೋಮಣ್ಣನನ್ನು ಕಾಂಗ್ರೆಸ್ ಗೆ ತರುವ ದಾರಿ ಸಿದ್ಧವಾಗುತ್ತಿರುವುದು.
ರಾಜಕೀಯವಾಗಿ ಬೆಂಗಳೂರಿನಿಂದ ಬೆಳಕಿಗೆ ಬಂದ ಸೋಮಣ್ಣ, ಜನತಾ ಪರಿವಾರದಲ್ಲಿ ಹಾಗೂ ಕಾಂಗ್ರೆಸ್ ನಲ್ಲಿ ಹೆಸರು ಮಾಡಿ ನಾಯಕರೆನಿಸಿಕೊಂಡರು. ನಂತರ ಬಿಜೆಪಿ ಸೇರಿ ಸಚಿವರಾಗಿ ಚಾಮರಾಜನಗರದ ಉಸ್ತುವಾರಿ ಸಚಿವರಾಗಿದ್ದರು. ಆಗ, ಚಾಮರಾಜನಗರದ ಲಿಂಗಾಯತ ಸಮುದಾಯವನ್ನು ಸಂಘಟಿಸಿದ್ದ ಸೋಮಣ್ಣ, ಹಳೆ ಮೈಸೂರು ಭಾಗದ ಲಿಂಗಾಯತರ ನಾಯಕರಾಗೋಕೆ ವೇದಿಕೆ ಸಿದ್ಧ ಮಾಡಿಕೊಂಡಿದ್ದರು. ಆದರೆ, ನಂತರದ ರಾಜಕೀಯ ಬೆಳವಣಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಈಗ ಅಂತಹ ಇನ್ನೊಂದು ಅವಕಾಶ ಸೋಮಣ್ಣ ಮನೆ ಬಾಗಿಲಿಗೆ ಬಂದಿದೆ. ಈ ಲೆಕ್ಕಚಾರ ಸರಿಯಾದರೆ, ಸೋಮಣ್ಣ ಸಿದ್ದು ಬತ್ತಳಿಕೆಯಲ್ಲಿನ ಪ್ರಬಲ ಅಸ್ತ್ರವಂತೂ ಆಗಲಿದ್ದಾರೆ.
ಹಳೆ ಮೈಸೂರು ಭಾಗ ಅದರಲ್ಲೂ ಚಾಮರಾಜನಗರ ಜಿಲ್ಲೆಯ ರಾಜಕೀಯದ ಒಳಸುಳಿಗಳನ್ನು ಸೋಮಣ್ಣ ಅರಿತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಇಟ್ಟುಕೊಂಡಿದ್ದ ಕ್ಷೇತ್ರದ ಜೊತೆಗಿನ ಸಂಪರ್ಕವನ್ನು ಹಾಗೇ ಮುಂದುವರಿಸಿದ್ದಾರೆ. ಅಲ್ಲದೆ, ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಹನೂರು ಕ್ಷೇತ್ರದಿಂದ ಸ್ಪರ್ಧಿಸೋ ಆಸೆಯನ್ನು ಹೊಂದಿದ್ದಾರೆ. ಸೋಮಣ್ಣ ಇಷ್ಟರ ಮಟ್ಟಿಗೆ ಕ್ಷೇತ್ರದಲ್ಲಿ ಗ್ರೌಂಡ್ ವರ್ಕ್ ಮಾಡಿರುವುದರಿಂದ ಅವರು ಕಾಂಗ್ರೆಸ್ ತೆಕ್ಕೆಗೆ ಮರಳಿ ಸೇರಿದರೆ ಲಿಂಗಾಯತ ಸಮುದಾಯದ ಮುಂದಾಳತ್ವ ಸಿಕ್ಕು ಅವರಿಗೆ ಲಾಭವಾಗುತ್ತೆ, ಅದರಿಂದ ಕಾಂಗ್ರೆಸ್ ಗೂ ಹೆಚ್ಚು ಲಾಭವಾಗುತ್ತೆ ಅನ್ನೋದು ರಾಜಕೀಯ ಪಡಸಾಲೆಯಲ್ಲಿನ ಚರ್ಚೆ. ಎಲ್ಲವೂ ಸಿದ್ದರಾಮಯ್ಯ ಅಂದುಕೊಂಡಂತೆ ಆದರೆ, ಚಾಮರಾಜನಗರದ ಲಿಂಗಾಯತ ಸಮುದಾಯದ ಮತಗಳು ವಿಭಜನೆ ಆಗೋದಂತೂ ಕಟ್ಟಿಟ್ಟ ಬುತ್ತಿ.