ಮೈಸೂರು: ಕೂಲಿ ಕೇಳಿದ್ದಕ್ಕೆ ಕಾರ್ಮಿಕನೋರ್ವನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ದಾರುಣ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ವಾಟಾಳ್ ಗ್ರಾಮದಲ್ಲಿ ಈ ಘಟನೆ ನಡೆದಿರುವುದು. ಇದೇ ಗ್ರಾಮದ 32 ವರ್ಷದ ನಿಂಗರಾಜು ಹತ್ಯೆಯಾದ ಕಾರ್ಮಿಕ. ಅದೇ ಗ್ರಾಮದ ಅಭಿಷೇಕ್, ಚೇತನ್ ಹಾಗೂ ಇವರ ಸ್ನೇಹಿತರಾದ ನವಿಲೂರಿನ ದೊರೆಸ್ವಾಮಿ ಹಾಗೂ ಕಾಮನಹಳ್ಳಿಯ ಮಹೇಶ್ ಎಂಬುವವರೇ ಹತ್ಯೆ ಮಾಡಿದ್ದು, ಇದೀಗ ಪರಾರಿಯಾಗಿದ್ದಾರೆ
ಕೊಲೆಯಾದ ಕಾರ್ಮಿಕ ನಿಂಗರಾಜು ತಿಂಗಳ ಹಿಂದೆ ಅಭಿಷೇಕ್ ಅವರ ಮನೆಗೆ ಕೆಲಸಕ್ಕೆ ತೆರಳಿದ್ದ. ಬಳಿಕ ಅಭಿಷೇಕ್ ಬಳಿ ಕೂಲಿ ಹಣ ಕೇಳಿದ್ದ. ಹೀಗಾಗಿ ಕೂಲಿ ಹಣ ಕೇಳಿದ್ದಕ್ಕೆ ಜಗಳ ತೆಗೆದ ಹಂತಕರು ನಿಂಗರಾಜು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅಂದಿನಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ನಿಂಗರಾಜು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.