ಮೈಸೂರು: ಐಟಿ ದಾಳಿಯ ಬಗ್ಗೆ ಹೈಕಮಾಂಡ್ ಯಾವುದೇ ವರದಿ ಕೇಳಿಲ್ಲ, ದಾಳಿಯ ಬಗ್ಗೆ ವರದಿ ತರಸಿಕೊಂಡು ನೋಡುತ್ತೇನೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾರಿಕೆಯ ಉತ್ತರ ನೀಡಿದರು.
ಐಟಿ ದಾಳಿಯ ಬಗ್ಗೆ ನನಗೆ ಏನೂ ಗೊತ್ತಿಲ್ಲ ಎಂದು ಪುನರುಚ್ಚರಿಸಿದ ಸಿಎಂ ದಾಳಿಯ ಬಗ್ಗೆ ಹೈಕಮಾಂಡ್ ಯಾವುದೇ ವರದಿ ಕೇಳಿಲ್ಲ, ಐಟಿ ಅಧಿಕಾರಿಗಳು ನಮಗೆ ವರದಿಯನ್ನ ನೀಡುವುದಿಲ್ಲ, ಆದರೂ ವರದಿಯನ್ನ ತರಿಸಿಕೊಂಡು ನೋಡುತ್ತೇನೆ ಎಂದು ಸಿಎಂ, ದಾಳಿಯ ಬಗ್ಗೆ ಮಾದ್ಯಮಗಳಿಗೆ ನೀಡಿರುವ ಮಾಹಿತಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಪ್ರಧಾನಿ ಪ್ರವಾಸಿ ದಿವಸ್ ಗೆ ಬೆಂಗಳೂರಿಗೆ ಬಂದಿದ್ದಾಗ ಬರ ಅನುದಾನಕ್ಕಾಗಿ ಮನವಿ ಸಲ್ಲಿಸಿದ್ದೇನೆ ಆದರೂ ಅನುದಾನ ಬಿಡುಗಡೆ ಮಾಡಿಲ್ಲ. ಕೇಂದ್ರದಿಂದ ಮಾಮೂಲಿ ಅನುದಾನ ಬಂದಿದೆ, ಬರ ನಿರ್ವಹಣೆಗಾಗಿ ವಿಶೇಷ ಅನುದಾನ ಬಂದಿಲ್ಲ.
ಯಡಿಯೂರಪ್ಪ ಸುಳ್ಳು ಹೇಳುತ್ತಾರೆ, ಎರಡು, ಮೂರು ದಿನಗಳಲ್ಲಿ ಇಬ್ಬರು ಸಚಿವರು ಮನೆಗೆ ಹೋಗುತ್ತಾರೆ ಎಂದು ಭವಿಷ್ಯ ನುಡಿದರು, ಅದು ನಿಜವಾಯಿತೇ ಎಂದು ಪತ್ರಕರ್ತರನ್ನೇ ಪ್ರಶ್ನೆ ಮಾಡಿದ ಸಿಎಂ, ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದು ವಾಗ್ದಾಳಿ ನಡೆಸಿದರು.