ಮೈಸೂರು: ನಿಮಗೆ ಮರ್ಯಾದೆ ಇಲ್ವಾ, ಸ್ವಾಭಿಮಾನ ಇಲ್ವಾ ಕೊಟ್ಟ ಕೆಲಸವನ್ನ ಸರಿಯಾಗಿ ಮಾಡದೆ ಕಾರಣ ಹೇಳುತ್ತೀರಾ, ನಿಮ್ಮನ ವರ್ಗಾವಣೆ ಮಾಡಬಾರದು, ಡಿಸ್ಮಿಸ್ ಮಾಡಬೇಕು ಎಂದು ಕೆಡಿಪಿ ಸಭೆಯಲ್ಲಿ ಸಿಎಂ ಸಿದ್ದರಾಯಮ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ ಪರಿ ಇದು.
ನಗರದ ಪ್ರಾದೇಶಿಕ ಕಛೇರಿಯ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು, ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು ಕುಡಿಯುವ ನೀರಿಗೂ ಜನ ಪರಿತಪ್ಪಿಸಿದ್ದು, ಇಂತಹ ಸಂಧರ್ಭದಲ್ಲಿ ಜನರ ಕಷ್ಟಗಳಿಗೆ ಪರಿಹಾರ ನೀಡಬೇಕಾದ ಅಧಿಕಾರಿಗಳು ಕೆಲಸ ಮಾಡದೆ ಸಬೂಬು ಹೇಳಿಕೊಂಡು, ಎಸಿ ಕಾರಿನಲ್ಲಿ ತಿರುಗಾಡಿದರೆ ಜನ ನಿಮ್ಮನ್ನ ಕೇಳುವುದಿಲ್ಲ. ನನನ್ನ ನಮ್ಮ ಸರ್ಕಾರವನ್ನ ಕೇಳುತ್ತಾರೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹಾಗೂ ಮುಖ್ಯಇಂಜಿನಿಯರ್ ಗೆ ಏಕವಚನದಲ್ಲಿ ಜಾಡಿಸಿದರು.
ಕೆಡಿಪಿ ಸಭೆಯ ಮುಖ್ಯಾಂಶಗಳು:
ರೈತರಿಗೆ ಮಾರಾಟ ಮಾಡುವ ಮೇವು ದರವನ್ನು ಕೆ.ಜಿ.ಗೆ ಮೂರು ರೂ.ಗಳಿಂದ ಒಂದೂವರೆ ರೂಪಾಯಿಗೆ ಇಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಪ್ರಸ್ತುತ ಮೇವನ್ನು ಕೆ.ಜಿ.ಗೆ ಆರು ರೂಪಾಯಿ ಪ್ರಕಾರ ಖರೀದಿ ಮಾಡಿ ಮೂರು ರೂ.ಗಳಿಗೆ ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಬರದಿಂದ ಸಂಕಷ್ಟಕ್ಕೆ ಗುರಿಯಾಗಿರುವ ರೈತರಿಗೆ ನೆರವಾಗಲು ದರ ಕಡಿತ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಮೇವಿಗೆ ಕೊರತೆ ಇದೆ. ಆದ್ದರಿಂದ ಮೇವು ಹೊರ ರಾಜ್ಯಗಳಿಗೆ ಸಾಗಣೆ ಆಗದಂತೆ ನೋಡಿಕೊಳ್ಳಬೇಕು. ಚೆಕ್ ಪೋಸ್ಟ್ ಗಳಲ್ಲಿ ಪೊಲೀಸ್ ಅಧಿಕಾರಿಗಳು ಕಟ್ಟೆಚ್ವರ ವಹಿಸಬೇಕು ಎಂದು ಸೂಚಿಸಿದರು. ಮೇವು ಲಭ್ಯತೆ ಕುರಿತು ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ಪಡೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು ಕೊರತೆ ಇರುವ ಕಡೆ ಮೇವು ಬೆಳೆಸಲು ರೈತರಿಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ಅವರಿಗೆ ಕಿಟ್ ಗಳನ್ನು ವಿತರಿಸಬೇಕು ಎಂದು ಆದೇಶಿಸಿದರು.
ಮೈಸೂರು ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನೂ ತೀವ್ರ ಆಗಬಹುದು. ಹೀಗಾಗಿ ಬರ ಪರಿಸ್ಥಿತಿ ಎದುರಿಸಲು ಮೇ ತಿಂಗಳ ವರೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಿ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಿ. ಅಗತ್ಯ ಇರುವ ಕಡೆ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದುಕೊಂಡು ನೀರು ಪೂರೈಸಿ.
ಕುಡಿಯುವ ನೀರಿಗೆ ತೊಂದರೆ ಎದುರಾಗದಂತೆ ನೋಡಿಕೊಳ್ಳಬೇಕು. ಇದಕ್ಕೆ ಸರ್ಕಾರ ಅಗತ್ಯ ಅನುದಾನ ಒದಗಿಸಲಿದೆ. ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ದೂರು ಬರದಂತೆ ನೋಡಿಕೊಳ್ಳುವುದು. ಡಿಸಿ ಮತ್ತು ಸಿಇಒಗಳ ಜವಾಬ್ದಾರಿ ಕುಡಿಯುವ ನೀರಿಗೆ ಯಾವುದೇ ಕಾನೂನು ಅಡ್ಡ ಬರಬಾರದು. ಸಮಸ್ಯೆ ಇದ್ದರೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳು ಹಾಜರಿದ್ದು ಕೆಡಿಪಿ ಮುಂದುವರೆದಿದೆ.