ಮೈಸೂರು: ನಾಗರಹೊಳೆಯ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಅಪಾರ ಪ್ರಮಾಣದ ಅರಣ್ಯ ಹಾಗೂ ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿದ್ದು, ಬೆಂಕಿಯನ್ನ ನಂದಿಸಲು ಅರಣ್ಯ ಇಲಾಖೆ ಹರಸಾಹಸ ಪಟಿದ್ದಾರೆ.
ಹುಣಸೂರು ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ಹಾಗೂ ಗೋಣಿಕೊಪ್ಪಲು ತಾಲ್ಲೂಕಿನ ಮೂರು ವಲಯಗಳಲ್ಲಿ ಬುಧವಾರ ರಾತ್ರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಅರಣ್ಯ ನಾಶವಾಗಿದೆ. ತಾಲ್ಲೂಕಿನ ಆನೆಚೌಕೂರು ವಲಯದ ಕಚುವಿನಹಳ್ಳಿ ಮತ್ತು ವೀರನಹೊಸಹಳ್ಳಿ ವಲಯದ ಆಲ್ದೊಡ್ಡಿ ಎಂಬಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ನೋಡ ನೋಡುತ್ತಿದ್ದಂತೆಯೇ ಬೆಂಕಿಯು ನೂರಾರು ಎಕರೆಗೆ ವ್ಯಾಪಿಸಿತು. ಗ್ರಾಮಸ್ಥರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಎಸ್.ಟಿ.ಎಫ್ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ರಾತ್ರಿಯವರೆಗೂ ಬೆಂಕಿ ಕೆನ್ನಾಲಿಗೆ ಕಾಣಿಸುತ್ತಲೇ ಇತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಗರಹೊಳೆ ಅಭಯಾರಣ್ಯದ ಹುಲಿ ಯೋಜನಾ ನಿರ್ದೇಶಕ ಮಣಿಕಂಠನ್, ಅರಣ್ಯಕ್ಕೆ ಬೆಂಕಿ ಬಿದ್ದಿದ್ದು ನಿಜ. ಹತೋಟಿಗೆ ತರಲು ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಬೆಂಕಿ ಆರಿಸುವ ತಂಡ ರಚಿಸಿಕೊಂಡು ಎಲ್ಲಾ ದಿಕ್ಕಿನಿಂದಲೂ ಪ್ರಯತ್ನ ಮಾಡಲಾಗುತ್ತಿದೆ. ಈ ಕಾಡ್ಗಿಚಿಗೆ ಕಾರಣ ತಿಳಿದು ಬಂದಿಲ್ಲ. ಎಷ್ಟು ಪ್ರದೇಶ ನಾಶವಾಗಿದೆ ಎಂಬುದನ್ನು ಸದ್ಯಕ್ಕೆ ಅಂದಾಜಿಸಲು ಸಾಧ್ಯವಿಲ್ಲ ಎಂದರು.