ಮೈಸೂರು: 68ನೇ ಗಣರಾಜೋತ್ಸವದ ಹಿನ್ನಲೆಯಲ್ಲಿ ಸನ್ನಡತೆಯ ಆಧಾರದ ಮೇಲೆ ಮೈಸೂರು ಕೇಂದ್ರಕಾರಾಗೃಹದಿಂದ ಬಿಡುಗಡೆಗೊಂಡ ಖೈದಿಗಳು ಸಂತೋಷದಿಂದ ಮನಪರಿವರ್ತನೆಗೊಂಡು ಹೊರ ಬಂದು ತಮ್ಮ ಸಂತೋಷವನ್ನ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ನಗರಿ ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ಕೈದಿಗಳ ಪೈಕಿ 26 ಮಂದಿಗೆ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಭಾಗ್ಯ ಲಭಿಸಿತು. ಆದರೆ ತಾಂತ್ರಿಕ ಕಾರಣದಿಂದ 23 ಮಂದಿ ಸೆರೆವಾಸದಿಂದ ಮುಕ್ತಿ ಪಡೆದರೆ, ಇನ್ನು ಮೂವರು ತಾಂತ್ರಿಕ ತೊಡಕು ನಿವಾರಣೆಯಾಗುತ್ತಿದ್ದಂತೆ ಬಿಡುಗಡೆ ಹೊಂದಲಿದ್ದಾರೆ. ಈ ಬಾರಿ ಯಾವುದೇ ಮಹಿಳಾ ಕೈದಿಗೆ ಬಿಡುಗಡೆ ಅವಕಾಶ ಸಿಗಲಿಲ್ಲ. ಈವತ್ತು ಬಿಡುಗಡೆಯಾದ ಕೈದಿಗಳದ್ದು ಒಬ್ಬೊಬ್ಬರದ್ದು ಒಂದೊಂದು ಕಥೆ. ಯಾವುದೋ ಭಾವೋಗ್ವೇದ, ಕೋಪದಲ್ಲಿ ತೆಗೆದುಕೊಂಡ ನಿರ್ಧಾರದಿಂದಾಗಿ ಇಷ್ಟು ದಿನ ಜೈಲು ವಾಸ ಅನುಭವಿಸಿದ್ದಾಯಿತು. ಇನ್ನು ಮುಂದಾದರೂ ನಾವು ಹೊಸ ಬದುಕು ಕಟ್ಟಿಕೊಳ್ಳುತ್ತೇವೆ ಎನ್ನುವ ಆಶಾಭಾವ ವ್ಯಕ್ತಪಡಿಸಿದರು ಬಿಡಿಗಡೆಯಾದ ನಂಜುಂಡ.
ಜೈಲಿನಲ್ಲಿ ಪದವೀ ಪಡೆದ ಬಸವರಾಜು:
ಇನ್ನು ಜೈಲಿನಲ್ಲಿ ಇದ್ದ ದಿನಗಳನ್ನು ವ್ಯರ್ಥ ಮಾಡದೆ ಪ್ರತಿಯೊಬ್ಬರು ಒಂದೊಂದು ವಿಚಾರದಲ್ಲಿ ಆಸಕ್ತಿ ತೋರಿಸಿ ಮುಂದಿನ ಜೀವನ ಉತ್ತಮಪಡಿಸಿಕೊಳ್ಳಲು ಪ್ರಯತ್ನ ಮಾಡಿದ್ದರು. ಅದರಲ್ಲಿ ಬೋಗಾದಿ ಸಮೀಪ ಹರ್ಷ ಬಾರ್ ಬಳಿ 15 ವರ್ಷಗಳ ಹಿಂದೆ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ 14 ಜೈಲುವಾಸ ಅನುಭವಿಸಿದ್ದ ಬಸವರಾಜು ಅವರಿಗೂ ಇಂದು ಬಿಡುಗಡೆ ಭಾಗ್ಯ ದೊರಕಿತು. ಈ ಘಟನೆ ನಡೆದಾಗ ಬಸವರಾಜುಗೆ ನಾಲ್ಕು ವರ್ಷದ ಪುತ್ರನಿದ್ದ. ಆದರೆ ಈಗ ಆತ ಬೆಳೆದು ದೊಡ್ಡವನಾಗಿ ತಂದೆಯ ಹಾದಿಯನ್ನೇ ಎದುರು ನೋಡುತ್ತಿದ್ದಾನೆ. ಜೈಲಿನಲ್ಲಿದ್ದಾಗಲೇ ಪದವಿ ವ್ಯಾಸಂಗ ಮುಗಿಸಿದ, ಸ್ನಾತಕೋತ್ತರ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ನಿರೀಕ್ಷಿಸುತ್ತಿದ್ದಾರೆ. ಇಂದು ಅವರು ಬಿಡುಗಡೆಯಾಗುತ್ತಿದ್ದಂತೆ ಅವರ ಪುತ್ರ ಭಾವುಕರಾಗಿ ಅಪ್ಪನನ್ನು ಆಲಿಂಗಿಸಿ ಆತ್ಮೀಯವಾಗಿ ಬರಮಾಡಿಕೊಂಡರು.
ಇನ್ನು ಬಿಡುಗಡೆಯಾದ ಕೈದಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ಬಿಡುಗಡೆ ಪ್ರಮಾಣಪತ್ರ ವಿತರಿಸಿ ಶುಭ ಹಾರೈಸಿದರು. ಕೇಂದ್ರ ಕಾರಾಗೃಹದ ಅಧೀಕ್ಷಕ ಆನಂದ್ ರೆಡ್ಡಿ, ಮೇಯರ್ ಎಂ.ಜೆ. ರವಿಕುಮಾರ್, ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಎಚ್.ಎ. ವೆಂಕಟೇಶ್, ಡಿಸಿಪಿಗಳಾದ ಎಚ್.ಟಿ. ಶೇಖರ್, ರುದ್ರಮುನಿ ಮುಂತಾದ ಗಣ್ಯರು ಕೈದಿಗಳನ್ನು ಹರಸಿ ಬೀಳ್ಕೊಟ್ಟರು. ಇನ್ನು ಬಿಡುಗಡೆಯಾದ ಹಕ್ಕಿಗಳನ್ನು ಒಳಗಿದ್ದ ಕೈದಿಗಳು ಭಾವಪೂರ್ಣವಾಗಿ ಬೀಳ್ಕೊಟ್ಟಿದ್ದು ಗಮನ ಸೆಳೆಯಿತು.
ಒಟ್ಟಾರೆ ಕೇಂದ್ರ ಕಾರಾಗೃಹದಲ್ಲಿ ಈವತ್ತು ಸಂಭ್ರಮ ಮನೆ ಮಾಡಿತ್ತು. 23 ಮಂದಿ ಕೈದಿಗಳು ಹೊಸ ಜೀವನ ಆರಂಭಿಸಲು ಹೆಜ್ಜೆ ಇಟ್ಟರೆ, ಅವರನ್ನೇ ಅನುಸರಿಸುತ್ತಿದ್ದ ಇನ್ನೂ ಬಹಳಷ್ಟು ಕೈದಿಗಳು ನಮಗೆ ಯಾವಾಗ ಹೀಗೆ ಮುಕ್ತಿ ಸಿಗೋದು ಅನ್ನುವ ಆಲೋಚನೆಯಲ್ಲಿದ್ದರು.