ಮೈಸೂರು: ಪಂಚಿನ ಕವಾಯಿತು ಮೈದಾನದಲ್ಲಿ 68ನೇ ಗಣರಾಜೋತ್ಸವದ ವಂದನೆ ಸ್ವೀಕರಿಸಿ, ಧ್ವಜಾರೋಹಣವನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ನೇರವೇರಿಸಿದರು.
ಶಾಲಾ-ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೇರವೇರಿತು. ಈ ಸಂಧರ್ಭದಲ್ಲಿ ಮಾತನಾಡಿದ ಸಚಿವರು, ಶಾಂತಿ ಮತ್ತು ಯುದ್ಧ ಕಾಲದಲ್ಲೂ ದೇಶವನ್ನು ಏಕಸೂತ್ರದಲ್ಲಿ ಬಂಧಿಸುವ ಸಾಮರ್ಥ್ಯವುಳ್ಳ ಸಂವಿಧಾನ ನಮ್ಮಲ್ಲಿದೆ. ಆದರೂ ನಾವು ಇಂದಿಗೂ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಮುಟ್ಟಬೇಕಾದ ಗುರಿಮುಟ್ಟಿಲ್ಲ. ಇನ್ನೂ ಸಾಧನೆಯ ಹಾದಿಯಲ್ಲಿಯೇ ನಿಧಾನವಾಗಿ ಹೆಜ್ಜೆ ಇಡುತ್ತಿರುವುದು ವಿಪರ್ಯಾಸ ಎಂದರು.
ಮಹಾತ್ಮ ಗಾಂಧೀಜಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ಕಂಡಿದ್ದ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಕನಸಿನ ಸುಂದರ ಸಮಾಜವನ್ನು ನಿರ್ಮಾಣ ಮಾಡುವ ಕಾರ್ಯ ಪ್ರತಿಯೊಬ್ಬ ಭಾರತೀಯನ ಮುಂದಿದೆ. ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ನ್ಯಾಯಗಳ ಸವಾಲನ್ನು ಎದುರಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದೃಢವಾದ ಹೆಜ್ಜೆಗಳನ್ನಿಟ್ಟು ಮುನ್ನಡೆಯುವ ಅವಶ್ಯಕತೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಭಾರತೀಯರು ಬ್ರಿಟಿಷರ ಪಾರುಪತ್ಯದಿಂದ ವಿಮೋಚನೆ ಹೊಂದಿ, ನಮಗೆ ನಾವೇ ಆಡಳಿತ ನಡೆಸುವ ಹಾಗೂ ಭಾರತಕ್ಕೆ ಸಂವಿಧಾನವನ್ನು ಆಳವಡಿಸಿಕೊಂಡ ಈ ದಿನವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸುತ್ತಾ ಬಂದಿರುತ್ತೇವೆ. ಸಂವಿಧಾನದ ಕರಡನ್ನು ಸಿದ್ದಪಡಿಸುವಾಗ ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ನಮಗೆ ಈಗಾಗಲೇ ತಿಳಿದಿರುವಂತೆ ಅಸ್ಪೃಶ್ಯರು ಮತ್ತು ಶೋಷಿತ ಸಮುದಾಯಗಳು ಮಾನವೀಯ ಹಕ್ಕುಗಳಿಂದ ಸಾವಿರಾರು ವರ್ಷಗಳಿಂದಲೂ ವಂಚಿತರಾಗಿದ್ದಾರೆ, ಸಂವಿಧಾನ ಬದ್ಧವಾಗಿ ಇವರಿಗೆ ಈ ಹಕ್ಕುಗಳನ್ನು ಸಂರಕ್ಷಿಸುವ ಉದ್ದೇಶವೇ ಹೊರೆತು ಮತ್ತಾವುದೇ ಅಲೋಚನೆ ತಮಗಿಲ್ಲವೆಂದು ಸ್ಪಷ್ಟಪಡಿಸಿದರು.
ಭಾರತ ಸಂವಿಧಾನ ಕೇವಲ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಿತವನ್ನು ಮಾತ್ರ ಕಾಪಾಡದೇ ಇಡೀ ಭಾರತದ ಜನತೆಯ ಆಶೋತ್ತರಗಳನ್ನು ಈಡೇರಿಸುತ್ತದೆ. ಸ್ವಾರ್ಥ, ದ್ವೇಷ, ಅಸೂಯೆ. ಅಜ್ಞಾನದ ಕತ್ತಲೆಯಿಂದ ಹೊರಬಂದು ಸಂವಿಧಾನದ ಆಶಯದಂತೆ ಆತ್ಮವಿಶ್ವಾಸದಿಂದ ದೇಶದ ಅಭಿವೃದ್ಧಿ ಬಗ್ಗೆ ಶ್ರದ್ಧೆ ಗೌರವದಿಂದ ದುಡಿಯೋಣ, ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಮತ್ತು ಸಾಮಾಜಿಕ ನ್ಯಾಯಗಳ ಸವಾಲನ್ನು ಎದುರಿಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ದೃಢವಾದ ಹೆಜ್ಜೆಗಳನ್ನಿಟ್ಟು ಮುನ್ನಡೆಯೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 34 ತುಕಡಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಮೈಸೂರು ನಗರದ ವಿವಿಧ ಶಾಲೆಗಳಿಂದ ಸುಮಾರು 1500 ಕ್ಕೂ ಹೆಚ್ಚು ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಿಕೊಟ್ಟರು.