ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗಿನ ಕೆಳಗೆ ಭ್ರಷ್ಟಾಚಾರ ನಡೆಯುತ್ತಿದ್ದು, ಸಚಿವ ರಮೇಶ್ ಜಾರಕಿಹೊಳಿ ಮನೆಯಲ್ಲಿ ಐಟಿ ದಾಳಿ ವೇಳೆ ಸಿಕ್ಕಿರುವ ಕಂತೆ ಕಂತೆ ಹಣವೇ ಇದಕ್ಕೆ ಸಾಕ್ಷಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕ್ಗಳಿಗೆ ಬಂದಿರುವ ಹಣವೆಲ್ಲ ನೇರವಾಗಿ ರಾಜ್ಯದ ಭ್ರಷ್ಟ ರಾಜಕಾರಣಿಗಳ ಮನೆಗೆ ಹೋಗುತ್ತಿದೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ? ಮೊದಲು ಸಿಎಂ ಭ್ರಷ್ಟರಿಗೆ ಕಡಿವಾಣ ಹಾಕಬೇಕಿದೆ ಎಂದು ಆಗ್ರಹಿಸಿದರು.
ಇನ್ನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಕುರಿತು ಸಚಿವ ರಮೇಶ ಜಾರಕಿಹೊಳಿ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಶೋಭಾ ಅವರು, ರಮೇಶ್ ಜಾರಕಿಹೊಳಿಯವರೇ ಹೇಳಿದಂತೆ ಅವರ ರಾಜೀನಾಮೆ ಪಡೆಯುವ ಸ್ಥಿತಿ ಬಂದರೆ ಎಲ್ಲಾ ಸಚಿವರು ರಾಜೀನಾಮೆ ಪಡೆಯಬೇಕಾಗುತ್ತದೆ ಎಂದಿದ್ದಾರೆ. ಜಾರಕಿಹೊಳಿಯವರ ಈ ಮಾತು ಸಚಿವರು ಯಾವ ಪ್ರಮಾಣದ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ತೋರಿಸುತ್ತದೆ ಎಂದು ಟೀಕಿಸಿದರು.
ಅಧೋಗತಿಯತ್ತ ಆರೋಗ್ಯ ಇಲಾಖೆ :
ಆರೋಗ್ಯ ಇಲಾಖೆ ರಮೇಶ್ ಕುಮಾರ್ ಅವರು ಬಂದ ನಂತರ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಆರೋಗ್ಯ ಸುರಕ್ಷಾ ಟ್ರಸ್ಟ್, ಸಿಎಂ ಹರೀಶ್ ಸಾಂತ್ವನ, ರಾಜೀವ್ ಆರೋಗ್ಯ ಶ್ರೀ ಯೋಜನೆ ಸೇರಿ ಐದು ಯೋಜನೆಗಳನ್ನು ಸರ್ಕಾರ ರೂಪಿಸಿತ್ತು. ಆದರೆ ಈ ಯೋಜನೆಗಳು ಬಡವರಿಗೆ ಸರಿಯಾಗಿ ದೊರೆಯದಂತಾಗಿದೆ ಎಂದು ಶೋಭಾ ದೂರಿದರು.
ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ 150 ಕೋಟಿ ಹಣ ಬಿಡುಗಡೆ ಮಾಡಿ ಪರದಾಡುತ್ತಿರುವ ರೋಗಿಗಳ ಸಂಕಷ್ಟವನ್ನು ನಿವಾರಣೆ ಮಾಡಬೇಕಿದೆ ಎಂದು ಹೇಳಿದ ಅವರು, ಕೇಂದ್ರ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುತ್ತಿದ್ದರು. ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ರಾಜ್ಯ ಮುಂದಾಗಿಲ್ಲವೆಂದು ಆರೋಪಿಸಿದರು.
ತರಾತುರಿಯಲ್ಲಿ ಪಠ್ಯ ಬದಲಾವಣೆ :
ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ 1 ರಿಂದ 8 ನೇ ತರಗತಿವರೆಗೆ ಪಠ್ಯ ಪುಸ್ತಕ ಬದಲಾವಣೆಯನ್ನು ತರಾತುರಿಯಲ್ಲಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಹೇಳಿದೆ. ಆದರೆ ಇದನ್ನು ಗಣನೆಗೆ ತೆಗೆದುಕೊಳ್ಳದ ರಾಜ್ಯ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸಲು ಹೊರಟಿದೆ. ಕರಡು ಪಠ್ಯ ಪುಸ್ತಕದ ಬಗ್ಗೆ ಯಾವುದೇ ಮಾಹಿತಿ ನೀಡದೇ ಪಠ್ಯ ಬದಲಾವಣೆ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ ಎಂದರು.
ಈ ವಿಚಾರ ಪಠ್ಯಪುಸ್ತಕ ರಚನಾ ಸಮಿತಿಯ ಗಮನಕ್ಕೂ ಬಂದಿಲ್ಲ. ಪಠ್ಯ ಬದಲಾವಣೆ ನೆಪದಲ್ಲಿ ಮಹಾನ್ ಪುರುಷರ ವಿಷಯವನ್ನು ಪಠ್ಯದಿಂದ ತೆಗೆದು ಹಾಕಲಾಗುತ್ತಿದೆ. ಪಠ್ಯಪುಸ್ತಕ ಬದಲಾವಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲು ಹೊರಟಿದೆ. ಈ ಬಗ್ಗೆ ಶಿಕ್ಷಣ ಸಚಿವ ತನ್ವೀರ್ ಸೇಠ್ ಏನು ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಕಲಹ ಸರಿಹೋಗುತ್ತೆ
ಇನ್ನು ಈಶ್ವರಪ್ಪ ಹಾಗೂ ಯಡಿಯೂರಪ್ಪನವರ ಒಳಜಗಳದ ಕುರಿತು ಪ್ರತಿಕ್ರಿಯಿಸಿದ ಸಂಸದೆ ಶೋಭಾ ಅವರು, ವೈಮನಸ್ಸು ಇಂದು ಅಥವಾ ನಾಳೆ ಸರಿಹೋಗಬಹುದು ಎಂದರು.