ಮೈಸೂರು: ನಗರದ ಮೆಟ್ರೋಪೋಲ್ ಬಳಿ ಇರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿರುವ ಅವರ ಪುತ್ಥಳಿಗೆ ಶನಿವಾರ ಮಹಾನಗರಪಾಲಿಕೆಯ ಮಹಾಪೌರ ಎಂ.ಜೆ.ರವಿಕುಮಾರ್ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು ಕೊಡವರು ದೇಶ ಕಾಯುವ ಕಾರ್ಯದಲ್ಲಿ ತೊಡಗಿದ್ದಾರೆ. ದೇಶಕ್ಕೋಸ್ಕರ ತಮ್ಮ ಪ್ರಾಣವನ್ನೇ ಮುಡಿಪಾಗಿಡುತ್ತಿದ್ದಾರೆ. ಅವರು ಸೈನ್ಯಕ್ಕೆ ಸೇರದೆ ದೇಶದ ಗಡಿಯನ್ನು ಕಾಯದೇ ಇರುತ್ತಿದ್ದರೆ ನಾವು ಇಂದು ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರಿಂದಲೇ ನಾವಿಂದು ಇಷ್ಟು ಸಂತೋಷವಾಗಿದ್ದೇವೆ ಎಂದರು.
ಯುವ ಪೀಳಿಗೆ ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ ನಿರತರಾಗಲು ಪಣತೊಡಬೇಕಿದೆ ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪನವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸೇರಿದ್ದ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಫೀಲ್ಡ್ ಮಾರ್ಶಲ್ ಅನುಯಾಯಿಗಳಾದ ಬೋಪಣ್ಣ, ಚೆಂಗಪ್ಪ, ಅಯ್ಯಪ್ಪ, ಕೊಡವ ಸಮಾಜದವರು, ಮಹಾನಗರಪಾಲಿಕೆ ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ, ಕಾವೇರಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಸೇರಿದಂತೆ 500ಕ್ಕೂ ಅಧಿಕ ಮಂದಿ ಉಪಸ್ಥಿತರಿದ್ದರು.