ಮೈಸೂರು: ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಟ ತಡೆಯಲು ಕಷ್ಟ, ಬದಲಾಗಿ ದೇಶದ್ಯಾಂತ ಮದ್ಯ ಮಾರಾಟ ನಿಷೇದ ಮಾಡಿದರೆ ಈ ಪಿಡುಗನ್ನ ತಪ್ಪಿಸಬಹುದು ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಅಂಜನೇಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ನಗರದ ವಸ್ತುಪ್ರದರ್ಶನ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡಕಟ್ಟು ಸಮುದಾಯದ ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜ್ಯಾದ್ಯಂತ ವ್ಯಾಪಕವಾಗಿ ನಡೆಯುತ್ತಿದ್ದು, ಶಿಸ್ತು ಕ್ರಮ ಕೈಗೊಂಡು ಅಕ್ರಮ ಮದ್ಯ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗುವುದು. ಬುಡಕಟ್ಟು ಸಮುದಾಯವರು ಮದ್ಯ ವ್ಯಸನಿಗಳಾಗಿರುವುದರಿಂದಲೇ ಬಡತನದಲ್ಲಿದ್ದು ವ್ಯಸನ ಮುಕ್ತಗೊಳಿಸಬೇಕು. ಇಲ್ಲದಿದ್ದರೆ ದೇಶಾದ್ಯಂತ ಏಕರೂಪ ಕಾನೂನನ್ನು ಜಾರಿಗೆ ತಂದು ಮದ್ಯ ನಿಷೇಧ ಮಾಡಬೇಕು ಎಂದು ಹೇಳಿದರು.
ಫೆಬ್ರವರಿ 1 ರಂದು ಆದಿವಾಸಿಗಳಿಗೆ ಸೌಲಭ್ಯ ವಿತರಣಾ ಸಮಾರಂಭವನ್ನು ಮೈಸೂರಿನ ವಸ್ತುಪ್ರದರ್ಶನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸೌಲಭ್ಯಗಳನ್ನು ವಿತರಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಆಂಜನೇಯ ತಿಳಿಸಿದರು.
ಮೈಸೂರು, ಚಾಮರಾಜನಗರ, ಕೊಡಗು, ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಗಳಲ್ಲಿ ಅರಣ್ಯದಲ್ಲಿ ಹಾಗೂ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಸೋಲಿಗ, ಜೇನುಕುರುಬ, ಮಲೆಕುಡಿಯಾ, ಕೊರಗ, ಸಿದ್ದಿ, ಯರವ ಮತ್ತು ಪಣಿಯನ್ ಸೇರಿದಂತೆ 13 ಬುಡಕಟ್ಟು ಸಮುದಾಯಗಳನ್ನೊಳಗೊಂಡ 34,071 ಕುಟುಂಬಗಳಿಗೆ ಈಗಾಗಲೇ ಪೌಷ್ಠಿಕ ಆಹಾರವನ್ನು ಸರ್ಕಾರದ ವತಿಯಿಂದ ವಿತರಿಸಲಾಗುತ್ತಿದ್ದು, ಸಿದ್ದರಾಮಯ್ಯ ಅವರು ಸಮಾವೇಶದಲ್ಲಿ ಪೌಷ್ಠಿಕ ಆಹಾರ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಸುಮಾರು 42 ಲಕ್ಷ ಬುಡಕಟ್ಟು ಸಮುದಾಯದ ಜನರಿದ್ದಾರೆ. ಮೂಲ ನಿವಾಸಿ ಬುಡಕಟ್ಟು ಸಮುದಾಯಗಳಾದ ಜೇನುಕುರುಬ ಮತ್ತು ಕೊರಗ ಸಮುದಾಯಗಳು ಶೈಕ್ಷಣಿಕವಾಗಿ ತೀರಾ ಹಿಂದುಳಿದಿದ್ದು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಪ್ರೋತ್ಸಾಹಿಸುವ ಉದ್ದೇಶದಿಂದ 2016-17ನೇ ಸಾಲಿನಿಂದ ಎಸ್ಎಸ್ಎಲ್ ಸಿ ಪೂರ್ಣಗೊಳಿಸಿದವರಿಗೆ ಮಾಸಿಕ 2000, ಪಿಯುಸಿ ಪೂರ್ಣಗೊಳಿಸಿದವರಿಗೆ 2500, ಪದವಿ ಮುಗಿಸಿದವರಿಗೆ 3500 ಹಾಗೂ ಸ್ನಾತಕೋತ್ತರ ಪದವಿ ಮುಗಿಸಿದವರಿಗೆ 4500 ರೂ ಗೌರವಧನವನ್ನು ಸಿದ್ದರಾಮಯ್ಯ ಅವರು ವಿತರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಬುಡಕಟ್ಟು ಸಮುದಾಯದವರ ಜೀವನೋಪಾಯಕ್ಕೆ ಯುಪಿಎ ಸರ್ಕಾರ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದೆ. ಅರಣ್ಯವಾಸಿ ವಿವಿಧ ಬುಡಕಟ್ಟು ಸಮುದಾಯಗಳ 11,376 ಕುಟುಂಬಗಳು ಮತ್ತು ಇತರೆ ಅರಣ್ಯವಾಸಿ ಸಮುದಾಯಗಳ 1045 ಕುಟುಂಬಗಳು ಸೇರಿದಂತೆ ಒಟ್ಟು 42,901 ಎಕರೆ ಜಮೀನನ್ನು ನೀಡಲಾಗಿದ್ದು, ಈ ಪೈಕಿ 13,049 ಎಕರೆ ಜಮೀನಿಗೆ ಪಟ್ಟಾ ವಿತರಿಸಲಾಗಿದೆ. ಉಳಿದ ಜಮೀನಿಗೆ ಶೀಘ್ರದಲ್ಲೇ ಪಟ್ಟಾ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಸಂಶೋಧನಾ ಸಂಸ್ಥೆಯಿಂದ ತರಬೇತಿ: ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ ಬುಡಕಟ್ಟು ಸಮುದಾಯದ ವಿದ್ಯಾವಂತ ಯುವಕ, ಯುವತಿಯರಿಗೆ ಹೊಲಿಗೆ ತರಬೇತಿ, ಮೊಬೈಲ್ ರಿಪೇರಿ, ಲಘುವಾಹನ ಚಾಲನಾ ತರಬೇತಿ ಕಂಪ್ಯೂಟರ್ ನಿರ್ವಾಹಣಾ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತರಬೇತಿ ಕಾರ್ಯಕ್ರಮದಲ್ಲಿ ಸವಲತ್ತು ಪಡೆದವರಿಗೆ ತರಬೇತಿ ಭತ್ಯೆ, ಪ್ರಮಾಣ ಪತ್ರ, ಹೊಲಿಗೆ ಯಂತ್ರಗಳು, ವಿವಿಧ ಮಾದರಿಯ ನಕ್ಷೆಗಳು, ಮಾಡೆಲ್ ಗಳು, ಗ್ಲೋಬ್, ಗಣಿತ, ವಿಜ್ಞಾನ ಪ್ರಯೋಗಾಲಯದ ಕಿಟ್ ಗಳನ್ನು ವಿತರಣೆ ಮಾಡಲಾಗುವುದು ಎಂದರು.
ಕೇರಳ ಮಾದರಿ ಶಿಕ್ಷಣ ಜಾರಿ: ಕೇರಳದಲ್ಲಿ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳಿಗೆ 1ರಿಂದ ಪಿಯುಸಿವರಗೆ ರೆಸಿಡೆನ್ಸಿಯಲ್ ಶಾಲೆಯಿದ್ದು ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಅದೇ ಮಾದರಿಯ ಶಿಕ್ಷಣವನ್ನು ರಾಜ್ಯದಲ್ಲಿ ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು ಮುಂದಿನ ಬಜೆಟ್ ನಲ್ಲಿ ಘೋಷಣೆ ಮಾಡಲಾಗುವುದು. ಜಾತಿ ಗಣತಿ ಪೂರ್ಣಗೊಂಡಿದ್ದು, ಸರ್ಕಾರಕ್ಕೆ ಮಂಡಿಸಿದ ಬಳಿಕ ಅನುಮೋದನೆ ಪಡೆದುಕೊಂಡು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
30 ಎಕರೆಯಲ್ಲಿ ಬಡಾವಣೆ: ಮಡಿಕೇರಿಯ ದಿಡ್ಡಹಳ್ಳಿಯಲ್ಲಿ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ಬುಡಕಟ್ಟು ಜನಾಂಗದೊಂದಿಗೆ ಮನೆಗಳನ್ನು ಕಟ್ಟಿಕೊಂಡಿದ್ದರು. ಭಿನ್ನಾಭಿಪ್ರಾಯ ಮೂಡಿ ಹೊಂದಾಣಿಕೆಯಾಗದಿದ್ದಾಗ ಹೊರಬಂದು ಅರಣ್ಯ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡಿದ್ದರು. ಆದರೆ ಅರಣ್ಯ ಪ್ರದೇಶದಲ್ಲಿ ಜಾಗ ನೀಡಲು ಸಾಧ್ಯವಿಲ್ಲದ್ದರಿಂದ ಬುಡಕಟ್ಟು ಸಮುದಾಯಗಳಿಗೆ 4 ಪ್ರದೇಶಗಳಲ್ಲಿ ಸುಮಾರು 30 ಎಕರೆ ಜಾಗವನ್ನು ಗುರುತಿಸಿದ್ದು ಬಡಾವಣೆ ನಿರ್ಮಾಣ ಮಾಡಿ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.