ಮೈಸೂರು: ರಾಜ್ಯ ರಸ್ತೆ ಸಾರಿಗೆ ಸೇರಿದ ಬಸ್ ಹಾಗೂ ಪೊಲೀಸ್ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪೊಲೀಸ್ ಜೀಪ್ ನಲ್ಲಿದ್ದ ಚಾಲಕ ಹಾಗೂ ಇನ್ಸ್ ಪೆಕ್ಟರ್ ಮೃತಪಟ್ಟ ಘಟನೆ ಮೈಸೂರಿನಲ್ಲಿ ಟಿ.ನರಸೀಪುರ ರಸ್ತೆಯಲ್ಲಿ ನಡೆದಿದೆ.
ಮೃತರನ್ನು ಅಪರಾದ ವಿಭಾಗದ ಇನ್ಸ್ ಪೆಕ್ಟರ್ ಮಹೇಶ ಕುಮಾರ್ ಹಾಗೂ ಡಿಆರ್ ಪೊಲೀಸ್ ಪೇದೆ ಲಕ್ಷ್ಮಣ(37) ಎಂದು ಗುರುತಿಸಲಾಗಿದೆ. ಸುತ್ತೂರು ಜಾತ್ರೆಗೆ ವಿಶೇಷ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದು, ಇದರ ನಿಮಿತ್ತ ಸುತ್ತೂರಿಗೆ ಹೋಗುತ್ತಿರುವಾಗ ಟಿ.ನರಸೀಪುರ ರಸ್ತೆಯ ಚಿಕ್ಕಳ್ಳಿಯ ಬಳಿ ಕೆಎಸ್ ಆರ್ ಟಿಸಿ ಬಸ್ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಪೊಲೀಸ್ ಜೀಪ್ ಪೇದೆ ಹಾಗೂ ಡ್ರೈವರ್ ಲಕ್ಷ್ಮಣ ಸ್ಥಳದಲ್ಲೆ ಮೃತಪಟ್ಟರೆ ತೀವ್ರವಾಗಿ ಗಾಯಗೊಂಡಿದ್ದ ಇನ್ಸ್ ಪೆಕ್ಟರ್ ಮಹೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜೀಪ್ ನಲ್ಲಿದ್ದ ಪೊಲೀಸ್ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸಿದ್ದಾರ್ಥ ನಗರ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.