ಮೈಸೂರು: ಹಕ್ಕಿ ಜ್ವರದಿಂದ ಬಂದ್ ಆಗಿದ್ದ ಮೈಸೂರು ಮೃಗಾಲಯ ಫೆಬ್ರವರಿ 2 ರೊಳಗೆ ಪುನರ್ ಆರಂಭವಾಗಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ಸ್ಪಷ್ಟ ಪಡಿಸಿದ್ದಾರೆ.
ಮೃಗಾಲಯದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜನವರಿ 4ರಿಂದ ಒಂದು ತಿಂಗಳ ಕಾಲ ತಜ್ಞರ ನಿರ್ದೇಶನದ ಮೇರೆಗೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯವನ್ನ ಪ್ರವಾಸಿಗರಿಗೆ ನಿಷೇಧ ಮಾಡಿ ಬಂದ್ ಮಾಡಲಾಗಿತ್ತು.
ಈ ಹಿನ್ನಲ್ಲೆಯಲ್ಲಿ ಜನವರಿ 27 ರಂದು ಭೂಪಾಲ್ನಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೈ ಸೆಕ್ಯೊರಿಟಿ ಎನಿಮಲ್ ಡಿಸೀಸಸ್ ಘಟಕದ ಪ್ರಯೋಗಾಲಯಕ್ಕೆ ಪಕ್ಷಿಗಳ ರಕ್ತ ಮಾದರಿ ಹಾಗೂ ಹಿಕ್ಕೆಯನ್ನ ಕಳುಹಿಸಿಕೊಡಲಾಗಿತ್ತು. ಮೊದಲ ಫಲಿತಾಂಶ ನೆಗೆಟಿವ್ ಬಂದಿದ್ದು, ನಂತರ ಎರಡನೇ ಮಾದರಿಗಳನ್ನ ಸಹ ಕಳುಹಿಸಿಕೊಡಲಾಗಿದ್ದು ಅದರ ಫಲಿತಾಂಶವು ನಿನ್ನೆ ಬಂದಿದ್ದು ಅದು ಸಹ ನೆಗೆಟಿವ್ ಆಗಿದ್ದು, ಈ ಹಿನ್ನಲ್ಲೆಯಲ್ಲಿ ಭೋಪಾಲ್ ನ ಪ್ರಾಯೋಗಾಲವೂ ಮೈಸೂರು ಮೃಗಾಲಯದಲ್ಲಿ ಹಕ್ಕಿ ಜ್ವರ ಹೆಚ್5ಎನ್8 ಮುಕ್ತವಾಗಿದ್ದು ಪ್ರವಾಸಿಗರಿಗೆ ಮೃಗಾಲಯವನ್ನ ತೆರೆಯಬಹುದು ಎಂದು ನಿನ್ನೆ ವರದಿ ಸಹ ಕಳುಹಿಸಿದೆ.
ಈ ಹಿನ್ನಲ್ಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ರಾಜ್ಯದ ಅರಣ್ಯ ಇಲಾಖೆಯ ಕಾರ್ಯದರ್ಶಿಯವರ ಒಪ್ಪಿಗೆಯ ನಂತರ ಫೆಬ್ರವರಿ 2 ರೊಳಗೆ ಮೃಗಾಲಯವನ್ನ ಪ್ರವಾಸಿಗರಿಗೆ ಮುಕ್ತಗೊಳಿಸಲಾಗವುದೆಂದು ಕಾರ್ಯನಿರ್ವಹಣ ನಿರ್ದೇಶಕಿ ಕಮಲಾ ಕರಿಕಳಾನ್ ಸ್ಪಷ್ಟ ಪಡಿಸಿದ್ದಾರೆ.