ಮೈಸೂರು: ಹೆತ್ತ ತಾಯಿಯೆ ತನ್ನ ಎರಡು ಹೆಣ್ಣು ಮಕ್ಕಳನ್ನು ಸಾಕಲಾರದೆ ಮಕ್ಕಳಿದವರಿಗೆ ಮಾರಾಟ ಮಾಡಿದ ಪ್ರಕರಣ ಹೆಚ್.ಡಿ. ಕೋಟೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು ಪೊಲೀಸರು ತಾಯಿ ಮತ್ತು ಮಕ್ಕಳನ್ನ ಪಡೆದವರನ್ನ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳ ತನ್ನ ಸ್ನೇಹಿತೆಯಾದ ಜಯಲಕ್ಷ್ಮೀ ಎಂಬ ಮಹಿಳೆಗೆ ಪರಿಚಿತರಾದ ಭೀಮನಹಳ್ಳಿ ಗ್ರಾಮದ ಮುತ್ತಣ್ಣ ಎಂಬವವರಿಗೆ 9 ವರ್ಷದ ಹೆಣ್ಣು ಮಗು(ನಿಹಾರಿಕಾ) ಮತ್ತು ಕೈಲಾಸಪುರ ಗ್ರಾಮದ ಮಹೇಂದ್ರ ಎಂಬುವವರಿಗೆ ಆರು ವರ್ಷದ ಹೆಣ್ಣು (ಸಾಗರಿಕಾ) ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ್ದಾಳೆ. ಮುತ್ತಣ್ಣ ಮತ್ತು ಮಹೇಂದ್ರ ಎಂಬುವವರಿಗೆ ಮಕ್ಕಳಿಲ್ಲದ ಕಾರಣ ಈ ಮಕ್ಕಳನ್ನು ಪಡೆದು ತಮ್ಮ ಮನೆಯಲ್ಲಿರಿಸಿಕೊಂಡು ಸಾಕುತ್ತಿದ್ದರು, ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮತ್ತು ಮಹಿಳಾ ಸಾಂತ್ವಾನ ಕೇಂದ್ರದ ಜಶೀಲ ಎಂಬುವವರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣ ಕಾರ್ಯ ಪ್ರವೃತ್ತರಾದ ಮಹಿಳಾ ಸಾಂತ್ವಾನ ಕೇಂದ್ರದ ಜಶೀಲ, ಮಕ್ಕಳ ಸಹಾಯವಾಣಿಯ ಪ್ರಭು, ಗುರುದೇವಾರಾಧ್ಯ ಮತ್ತು ಪೊಲೀಸರು ಈ ಪ್ರಕರಣವನ್ನು ಬೇದಿಸಿ ಮಕ್ಕಳನ್ನು ಮತ್ತು ಮಕ್ಕಳನ್ನು ಸಾಕುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡು ಮಕ್ಕಳನ್ನು ಮಾರಾಟ ಮಾಡಿದ್ದ ತಾಯಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
ಮಕ್ಕಳ ಮಾರಾಟಕ್ಕೆ ಕಾರಣವೇನು?
ಮಂಗಳ ಹೆಚ್.ಡಿ ಕೋಟೆ ತಾಲ್ಲೂಕಿನ ಬಿದರಹಳ್ಳಿ ಗ್ರಾಮದವಳು, ಇವಳು ಆಂಧ್ರ ಮೂಲದ ವ್ಯಕ್ತಿಯನ್ನ ಪ್ರೀತಿಸಿ ಮದುವೆಯಾಗಿ ಮೈಸೂರಿನಲ್ಲಿ ಸಂಸಾರ ನಡೆಸುತ್ತಿದ್ದಳು. ಈ ಮಧ್ಯ ಇವರಿಬ್ಬರಿಗೆ ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದು, ಇದಕ್ಕಿದಂತೆ ಗಂಡ ಮಂಗಳನನ್ನು ಬಿಟ್ಟು ಓಡಿ ಹೋದ. ಇದರಿಂದ ಕಂಗಲಾದ ಮಂಗಳ ಮಕ್ಕಳನ್ನ ಸಾಕಲು ಕಷ್ಟ ಪಡುತ್ತಿದ್ದು, ಈ ಮಧ್ಯೆ ಸ್ನೇಹಿತೆ ಜಯಲಕ್ಷ್ಮೀ ಸಲಹೆಯಂತೆ, ಮಕ್ಕಳಿಲ್ಲದ ಮುತ್ತಣ ಹಾಗೂ ಮಹೇಂದ್ರ ಎಂಬುವವರಿಗೆ ಒಳ್ಳೆಯ ರೀತಿ ಸಾಕುವಂತೆ ಅಲ್ಪ ಹಣಕ್ಕೆ ಮಾರಾಟ ಮಾಡಿರುವುದಾಗಿ ಮಂಗಳ ಪೊಲೀಸ್ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾಳೆ.
ಈ ಪ್ರಕರಣ ವಿಶೇಷ ಪ್ರಕರಣವಾಗಿದ್ದು, ಮೈಸೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಲಾ ಕೃಷ್ಣಮೂರ್ತಿ ಮತ್ತು ಎ ಎಸ್ ಪಿ ಹರೀಶ್ ಪಾಂಡೆ ಮತ್ತು ವೃತ್ತ ನಿರೀಕ್ಷಕ ಹರೀಶ್ ಹರೀಶ್ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಮಕ್ಕಳು ಹಾಗೂ ತಾಯಿಯನ್ನ ಬಾಲಕಿಯರ ಬಾಲಮಂದಿರದಲ್ಲಿ ಇಡಲಾಗಿದ್ದು, ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಯೂ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ.