ಮೈಸೂರು: ಮಾಧ್ಯಮ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆ ಗುರುತಿಸಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡ ಮಾಡುವ ವಾರ್ಷಿಕ ಪ್ರಶಸ್ತಿಗೆ ಮೈಸೂರಿನ ಮೂವರು ಹಿರಿಯ ಪತ್ರಕರ್ತರು ಈ ಬಾರಿ ಆಯ್ಕೆಯಾಗಿದ್ದಾರೆ.
ಮಾನವೀಯ ಸಮಸ್ಯೆ ಕುರಿತಂತೆ ನೀಡಲಾಗುವ 2016ನೇ ಸಾಲಿನ ಮೈಸೂರು ದಿಗಂತ ಪ್ರಶಸ್ತಿಗೆ ವಿಜಯಕರ್ನಾಟಕ ಪತ್ರಿಕೆಯ ವಿಶೇಷ ಸಹಾಯಕ ಸಂಪಾದಕ ಚಿ.ಜ.ರಾಜೀವ್ ಅವರು ಭಾಜನರಾಗಿದ್ದಾರೆ. (ಲೇಖನದ ಶೀರ್ಷಿಕೆ: ‘ಎಣ್ಣೆ ನಮ್ಮೂರನ್ನೇ ನಾಶ ಮಾಡ್ತಾ ಇದೆ’) ಅಲ್ಲದೆ, ಸಾಮಾನ್ಯ ವರ್ಗದಲ್ಲಿ ಮೈಸೂರು ಮಿತ್ರ ಪತ್ರಿಕೆಯ ಹಿರಿಯ ಉಪಸಂಪಾದಕ ಎ.ಸಿ.ಪ್ರಭಾಕರ್ ಹಾಗೂ ವಿಜಯವಾಣಿ ಪತ್ರಿಕೆಯ ಛಾಯಾಗ್ರಾಹಕ ಕೆ.ಎಚ್.ಚಂದ್ರು ಅವರು ಈ ಬಾರಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರಶಸ್ತಿ ಪುರಸ್ಕೃತರಿಗೆ ಸಧ್ಯದಲ್ಲೇ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 20 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ಪ್ರಕಟಣೆ ತಿಳಿಸಿದೆ. ಪ್ರಶಸ್ತಿಗೆ ಭಾಜನರಾದ ಮೂವರು ಪತ್ರಕರ್ತ ಮಿತ್ರರನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಆತ್ಮೀಯವಾಗಿ ಅಭಿನಂದಿಸಲಿದೆ.