ಮೈಸೂರು: ಮೈಸೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಜರ್ಬಾದ್ನ ಎನ್ಪಿಸಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಮೈಸೂರು ಮೇಯರ್ ಎಂ.ಜೆ.ರವಿಕುಮಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಡಿ.ರಂದೀಪ್, ದಡಾರ ಮತ್ತು ರುಬೆಲ್ಲಾ ಕಾಯಿಲೆ ಬರದಂತೆ ತಡೆಯುವ ಉದ್ದೇಶದಿಂದ ರಾಜ್ಯದಾದ್ಯಂತೆ ಲಸಿಕೆ ಹಾಕಲಾಗುತ್ತಿದ್ದು ಜ.5ರಂದು ಚಾಲನೆ ನೀಡಲಾಗಿದೆ. ಇಂದು ನಮ್ಮ ಮೈಸೂರು ಜಿಲ್ಲೆಯಲ್ಲಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಾದ್ಯಂತ ಸುಮಾರು 3000 ಶಾಲೆಗಳನ್ನು ಗುರುತಿಸಲಾಗಿದ್ದು, ಅಭಿಯಾನದಲ್ಲಿ ಕೈಜೋಡಿಸಿ ಯಶಸ್ವಿಗೊಳಿಸುವಂತೆ ಪತ್ರ ಬರೆಯಲಾಗಿದೆ. ಸುಮಾರು 7000 ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿ ಲಸಿಕೆ ಹಾಕಲಿದ್ದಾರೆ. ಜತೆಗೆ ಲಯನ್ಸ್ ಕ್ಲಬ್ ಸಹ ಅಭಿಯಾನದಲ್ಲಿ ಕೈಜೋಡಿಸಿದೆ ಎಂದು ಹೇಳಿದರು.
ಜಿಲ್ಲೆಯನ್ನು ದಡಾರ ಹಾಗೂ ರುಬೆಲ್ಲಾ ಮುಕ್ತ ಮಾಡುವ ಉದ್ದೇಶದಿಂದ ಲಸಿಕೆ ಹಾಕಲಾಗುತ್ತಿದ್ದು, ಪೋಷಕರು ಸಹಕರಿಸಬೇಕು. ಪ್ರತಿಯೊಬ್ಬರು ತಮ್ಮ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸುವುದಲ್ಲದೆ ಅಕ್ಕಪಕ್ಕದ ಮನೆಯವರಿಗೂ ಅರಿವು ಮೂಡಿಸಬೇಕು. ಲಸಿಕೆ ಹಾಕಿಸುವುದರಿಂದ ಯಾವುದೇ ರೀತಿಯ ಅಡ್ಡಪರಿಣಾಮಗಳು ಆಗುವುದಿಲ್ಲ. ಒಂದು ವೇಳೆ ಆದರೂ ಶಿಕ್ಷಕರು ಹಾಗೂ ವೈದ್ಯರಿಗೆ ಗುಣಪಡಿಸುವ ವಿಧಾನವನ್ನು ತಿಳಿಸಲಾಗಿದ್ದು, ಯಾವುದೇ ಆತಂಕವಿಲ್ಲದೆ ಲಸಿಕೆ ಹಾಕಿಸಬಹುದು ಎಂದು ಹೇಳಿದರು.