ಮೈಸೂರು: ಬೆಂಬಲಿಗರ ಸಭೆಯ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ನಿರ್ಧಾರವನ್ನ ಪ್ರಕಟಿಸಿದ ನಂಜನಗೂಡಿನ ಜೆಡಿಎಸ್ ಮುಖಂಡ ಕಳಲೇ ಕೇಶವ ಮೂರ್ತಿ ಮುಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸಿಎಂ ಸೂಚನೆಯಂತೆ ಸ್ಪರ್ಧೇ ಮಾಡಲು ನಿರ್ಧರಿಸಿದ್ದಾರೆ.
ಇಂದು ನಂಜನಗೂಡಿನ ಯಾತ್ರಿ ಭವನದಲ್ಲಿ ಬೆಂಬಲಿಗರ, ಹಿತೈಷಿಗಳ ಸಭೆ ಕರೆದು ಮುಂದಿನ ರಾಜಕೀಯ ನಿರ್ಧಾರದ ಬಗ್ಗೆ ಅಭಿಪ್ರಾಯ ಪಡೆದ ಕೇಶವಮೂರ್ತಿ ಸೇರಿದ್ದ ಎಲ್ಲಾ ಬೆಂಬಲಿಗರು, ಹಿತೈಷಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕೆಂದು ಒಟ್ಟಾಗಿ ಕೈ ಎತ್ತಿ ಬೆಂಬಲ ಸೂಚಿಸಿದ ಬಳಿಕ ಮಾತನಾಡಿದ ಕೇಶವಮೂರ್ತಿ, ನಾನು ಸಿಎಂ ಭೇಟಿ ಮಾಡಿದಾಗ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೇ ಮಾಡುವಂತೆ ಆಹ್ವಾನ ನೀಡಿದರು. ಆದರೆ ನಾನು ಕಾರ್ಯಕರ್ತರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಲು ನಿರ್ಧರಿಸಿದೆ.
ಅದರಂತೆ ಮುಂದಿನ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಬಾರದ ಮನಸ್ಸಿನಿಂದ ನಿರ್ಧರಿಸಿದ್ದು ವೇದಿಕೆಯಲ್ಲಿ ಭಾಷಣ ಮಾಡುವಾಗಲೇ ಭಾವುಕರಾದ ಕೇಶವಮೂರ್ತಿ ನಾಳೆ ಜೆಡಿಎಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಿಎಂ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಲು ಬೆಂಬಲಿಗರ ಒತ್ತಾಯದ ಮೇರೆಗೆ ನಿರ್ಧರಿಸಿದ್ದೇನೆ ಎಂದು ತಿಳಿಸಿದರು.