ಮೈಸೂರು: ನಿನ್ನೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದ ಕಳಲೇ ಕೇಶವಮೂರ್ತಿ ಇಂದು ತಮ್ಮ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವಾಗ ಭಾವುಕರಾದ ಘಟನೆ ನಂಜನಗೂಡು ತಾಲ್ಲೂಕು ಜನತಾದಳ ಕಛೇರಿಯಲ್ಲಿ ನಡೆದಿದೆ.
ನಂಜನಗೂಡು ಮೀಸಲು ಕ್ಷೇತ್ರದ ಉಪಚುನಾವಣಾ ಕಣಾ ದಿನದಿಂದ ದಿನಕ್ಕೆ ಕೂತುಹಲ ಮೂಡಿಸುತ್ತಿದ್ದು ನಿನ್ನೆ ಬೆಂಬಲಿಗರ ಸಭೆ ನಡೆಸಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದ ಕಳಲೇ ಕೇಶವ ಮೂರ್ತಿ ಇಂದು ಜನತಾದಳದ ಪ್ರಾಥಮಿಕ ಸದಸ್ಯತ್ವ ಹಾಗೂ ನಂಜನಗೂಡು ಮೀಸಲು ವಿಧಾನಸಭಾ ಕ್ಷೇತ್ರದ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಮೈಸೂರು ಜಿಲ್ಲಾ ಜೆಡಿಎಸ್ ಗ್ರಾಮಾಂತರ ಅಧ್ಯಕ್ಷ ನರಸಿಂಹಸ್ವಾಮಿ ಅವರಿಗೆ ನಂಜನಗೂಡು ಜೆಡಿಎಸ್ ಕಛೇರಿಯಲ್ಲಿ ರಾಜೀನಾಮೆ ಸಲ್ಲಿಸಿದ್ದು, ತಮ್ಮ ಮೂರು ದಶಕಕ್ಕೂ ಹೆಚ್ಚು ಕಾಲದ ಜೆಡಿಎಸ್ ಭಾಂದವ್ಯವನ್ನ ಜ್ಞಾಪಿಸಿಕೊಂಡು ರಾಜೀನಾಮೆ ನೀಡುವಾಗ ಭಾವುಕರಾದರು.
ಇವರ ಜೊತೆ ನಂಜನಗೂಡು ನಗರ ಜೆಡಿಎಸ್ ಅಧ್ಯಕ್ಷ ಎನ್.ಎಂ ಮಂಜುನಾಥ್ ಸಹ ರಾಜೀನಾಮೆ ನೀಡಿದ್ದು, ಇವರನ್ನ ಬೆಂಬಲಿಸಿ ಇನ್ನೇರೆಡು ಮೂರು ದಿನಗಳಲ್ಲಿ ಆರು ಜನ ಜೆಡಿಎಸ್ ನಗರಸಭಾ ಸದಸ್ಯರು ತಮ್ಮ ನಿರ್ಧಾರವನ್ನ ಪ್ರಕಟಿಸಲು ನಿರ್ಧರಿಸಿದ್ದಾರೆ ಎಂದು ಕೇಶವ ಮೂರ್ತಿ ಸ್ಪಷ್ಟ ಪಡಿಸಿದ್ದು ಈ ಸಂಬಂಧ ಅಧಿವೇಶನ ಮುಗಿದ ಬಳಿಕ ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ ಸೇರಲು ನಿರ್ಧರಿಸಿರುವುದಾಗಿ ಕೇಶವ ಮೂರ್ತಿ ಸ್ಪಷ್ಟ ಹೇಳಿದ್ದಾರೆ.
ಕಾಂಗ್ರೆಸ್ ಸೇರಲು ಬೆಂಬಲಿಗರ ಅನುಮತಿ ಪಡೆದಿದ್ದೇಗೆ?
ನಿನ್ನೆ ಕಾಂಗ್ರೆಸ್ ಸೇರುವ ಬಗ್ಗೆ ನಂಜನಗೂಡಿನ ಯಾತ್ರಿ ಭವನ್ ದಲ್ಲಿ ಸಭೆ ಕರೆದಿದ್ದ ಕೇಶವ ಮೂರ್ತಿ ತಮ್ಮ ವೇದಿಕೆಯ ಭಾಷಣದಲ್ಲಿ ಭಾವುಕರಾಗಿ ಕಾಂಗ್ರೆಸ್ ಸೇರುವ ಬಗ್ಗೆ ತಮ್ಮ ಅಭಿಪ್ರಾಯವನ್ನ ಕೈ ಮೇಲತ್ತುವ ಮೂಲಕ ತಿಳಿಸಬೇಕೆಂದು ಹೇಳಿದಾಗ ಸಭೆಯಲ್ಲಿ ಹಾಜರಿದ್ದ ಬೆಂಬಲಿಗರು ತಮ್ಮ ಕೈಗಳನ್ನ ಮೇಲೆತ್ತಿ ಒಗ್ಗಟ್ಟಿನಿಂದ ಕಾಂಗ್ರೆಸ್ ಸೇರಬೇಕೆಂದು ಒತ್ತಾಯಿಸಿದರು. ಆ ಹಿನ್ನಲ್ಲೆಯಲ್ಲಿ ಇಂದು ಜೆಡಿಎಸ್ ಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಲು ಕೇಶವ ಮೂರ್ತಿ ನಿರ್ಧರಿಸಿದ್ದಾರೆ.