ಮೈಸೂರು: ಬರದ ಹಿನ್ನಲೆಯಲ್ಲಿ ಪ್ರಾಣಿಗಳು ಆಹಾರದ ಸಮಸ್ಯೆ ಎದುರಿಸುತ್ತಿದ್ದು, ಸಸ್ಯಹಾರಿ ಪ್ರಾಣಿಗಳು ಅರಣ್ಯದಲ್ಲಿ ಹಸಿರು ಒಣಗಿ ನಿಂತಿರುವ ಕಾರಣದಿಂದ ಆಹಾರ ಮತ್ತು ನೀರನ್ನು ಅರಸಿಕೊಂಡು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತ್ತಿವೆ. ಮತ್ತೊಂದೆಡೆ ಮಾಂಸಹಾರಿ ಪ್ರಾಣಿಗಳಿಗೆ ಸರಿಯಾದ ಬೇಟೆ ಸಿಗದ ಕಾರಣದಿಂದ ಅವು ಹಸಿವಿನಿಂದ ಕಂಗಾಲಾಗಿವೆ.
ಈಗಾಗಲೇ ಅರಣ್ಯದಲ್ಲಿ ನೀರು ಮತ್ತು ಬೇಟೆ ಸಿಗದೆ ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಇದಕ್ಕೆ ಸಾಕ್ಷಿ ಎಂಬಂತೆ ಚಿರತೆಯೊಂದು ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಕಿರು ಅರಣ್ಯ ಪ್ರದೇಶದಲ್ಲಿ ಹಸಿವಿನಿಂದ ಕೆಲ ದಿನಗಳ ಹಿಂದೆ ಸಾವನ್ನಪ್ಪಿದೆ.
ಬೆಟ್ಟದ ತಳಭಾಗದಲ್ಲಿ ಮಳೆ ಬಂದಾಗ ನೀರು ಹರಿದು ಹೋಗುವಂತಹ ಹಳ್ಳ ಪ್ರದೇಶದಲ್ಲಿ ಬಿದ್ದು ಸಾವನ್ನಪ್ಪಿದ್ದು, ಸತ್ತ ಗಂಡು ಚಿರತೆ ಐದು ವರ್ಷ ಪ್ರಾಯದ್ದಾಗಿದೆ ಎಂದು ಅಂದಾಜಿಸಲಾಗಿದೆ.
ಬರದ ಹಿನ್ನಲೆಯಲ್ಲಿ ಯಾವುದೇ ಸಸ್ಯಹಾರಿ ಪ್ರಾಣಿಗಳು ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಚಿರತೆಗೆ ಬೇಟೆಯ ಕೊರತೆಯಾಗಿದ್ದು ಅಲೆದಾಡಿ ಸುಸ್ತಾಗಿ ಹಸಿವಿನಿಂದ ಪ್ರಾಣಬಿಟ್ಟಿರಬಹುದೆಂದು ಶಂಕಿಸಲಾಗಿದೆ.
ದನ ಮೇಯಿಸಲೆಂದು ಪೊದೆಯ ಕಡೆಗೆ ಹೋದಾಗ ಸ್ಥಳೀಯರು ತೆರಳಿದಾಗ ಚಿರತೆ ಕಂಡಿದೆ. ಇದನ್ನು ನೋಡಿ ಭಯದಿಂದ ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಉಪವಲಯ ಅರಣ್ಯಾಧಿಕಾರಿ ಶಶಿಕುಮಾರ್, ಅರಣ್ಯಾಧಿಕಾರಿ ನಿತಿನ್ ಕುಮಾರ್, ಅರಣ್ಯ ರಕ್ಷಕ ಮಂಜುನಾಥ್, ವೀಕ್ಷಕರಾದ ಶಿವನಂಜು, ರಾಚಯ್ಯ, ಮರಿಸ್ವಾಮಿ ಮತ್ತು ನಾಗರಾಜು ಮೊದಲಾದವರು ಆಗಮಿಸಿ ಪರಿಶೀಲನೆ ನಡೆಸಿದಾಗ ಚಿರತೆ ಸಾವನ್ನಪ್ಪಿರುವುದು ಕಂಡು ಬಂದಿದೆ.
ಅರಣ್ಯಾಧಿಕಾರಿಗಳ ಪ್ರಕಾರ ಚಿರತೆ ಕುಡಿಯಲು ನೀರಿಲ್ಲದ, ಬೇಟೆಯಾಡಲು ಶಕ್ತಿಯಿಲ್ಲದೆ ಹಸಿವಿನಿಂದ ಒಂದು ದಿನದ ಹಿಂದೆಯೇ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಉಪವಲಯ ಅರಣ್ಯಾಧಿಕಾರಿ ಶಶಿಕುಮಾರ್ ತಿಳಿಸಿದ್ದಾರೆ.
ಚುಂಚನಹಳ್ಳಿ ಕೋಣನೂರು ಮತ್ತು ಹನುಮನಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಚಿರತೆಗಳು ವಾಸವಿದ್ದು, ಇವುಗಳ ಪೈಕಿ ಕೆಲವು ಬೇರೆಡೆಗೆ ತೆರಳಿದ್ದರೆ ಮತ್ತೆ ಕೆಲವು ಆಹಾರವಿಲ್ಲದೆ ಸಾವನ್ನಪ್ಪುತ್ತಿರುವುದು ಕಂಡು ಬಂದಿದೆ. ಮಳೆ ಸಕಾಲಕ್ಕೆ ಬರದೆ ಹೋದರೆ ಮುಂದಿನ ದಿನಗಳಲ್ಲಿ ಇನ್ನೆಷ್ಟು ಪ್ರಾಣಿಗಳು ಜೀವ ಕಳೆದುಕೊಳ್ಳಬೇಕಾಗುತ್ತದೆಯೋ ಎಂಬ ಆತಂಕ ಪ್ರಾಣಿಪ್ರಿಯರನ್ನು ಕಾಡುತ್ತಿದೆ.