ಮೈಸೂರು: ದಟ್ಟಗಳ್ಳಿ ಲಿಂಗಾಬುಧಿ ಕೆರೆಯ ಬಳಿ ಚಿರತೆಯೊಂದು ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಬೋನನ್ನು ಇರಿಸಲಾಗಿದ್ದು, ಅರಣ್ಯ ಸಿಬ್ಬಂದಿಗಳು ಇತ್ತ ನಿಗಾ ವಹಿಸಿದ್ದರು. ಇದೇ ವೇಳೆ ಎಂಟು ಮಂದಿಯನ್ನೊಳಗೊಂಡ ಮರಗಳ್ಳರ ತಂಡವೊಂದು ಅಲ್ಲಿಗೆ ಆಗಮಿಸಿದ್ದು, ಮರ ಕದಿಯಲು ಮುಂದಾಗಿದ್ದಾರೆ. ಲಿಂಗಾಬುಧಿ ಕೆರೆಯ ಸಮೀಪ ಗಂಧದ ಮರವನ್ನು ಕದಿಯಲು ಬಂದ ಮರಗಳ್ಳರು ಮತ್ತು ಅರಣ್ಯ ಸಿಬ್ಬಂದಿಗಳ ನಡುವೆ ಶನಿವಾರ ಬೆಳಗಿನ ಜಾವ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಏಳುಮಂದಿ ಪರಾರಿಯಾದ ಘಟನೆ ನಡೆದಿದೆ.
ತಕ್ಷಣ ಮಾಹಿತಿ ಸಿಕ್ಕ ಪರಿಣಾಮ ಅರಣ್ಯ ಸಿಬ್ಬಂದಿಗಳು ಮರಗಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಅವರು ತಪ್ಪಿಸಿಕೊಂಡು ಓಡಿಹೋಗಲು ಯತ್ನಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಮರಗಳ್ಳರೂ ಗುಂಡು ಹಾರಿಸಿದ್ದು, ಗುಂಡಿನ ಚಕಮಕಿ ನಡೆದಿದೆ. ಇದೇ ವೇಳೆ ಮರಗಳ್ಳರ ತಂಡದಲ್ಲಿದ್ದ ವ್ಯಕ್ತಿಯೋರ್ವನಿಗೆ ಗುಂಡು ತಗುಲಿದ್ದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಉಳಿದ ಏಳುಮಂದಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಕುವೆಂಪುನಗರ ಠಾಣೆಯ ಇನ್ಸಪೆಕ್ಟರ್ ಜಗದೀಶ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಂಡೇಟಿಗೆ ಬಲಿಯಾದ ವ್ಯಕ್ತಿಯ ಕೈ ಮೇಲೆ ರವಿಕೃಷ್ಣ ಎಂಬ ಹಚ್ಚೆಗುರುತ್ತಿದ್ದು, ಈತ ಎಲ್ಲಿಯವನು ಎನ್ನುವ ಮಾಹಿತಿ ತಿಳಿದುಬರಬೇಕಿದೆ. ಸ್ಥಳದಲ್ಲಿ ಚೀಲವೊಂದು ಪತ್ತೆಯಾಗಿದ್ದು, ಅದರಲ್ಲಿ 15ರಿಂದ 20 ಗಂಧದ ತುಂಡುಗಳು, ಕತ್ತಿ, ಮರ ಕತ್ತರಿಸುವ ಮಶಿನ್ ಗಳು ಲಭಿಸಿವೆ. ಅರಣ್ಯಾಧಿಕಾರಿ ಕರಿಕಾಳನ್ ಸೇರಿದಂತೆ ಮೈಸೂರು ವಲಯ ಅರಣ್ಯಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.