ಮೈಸೂರು: ಮೈಸೂರಿನ ಎನ್.ಆರ್.ವ್ಯಾಪ್ತಿಯಲ್ಲಿ ವಿವಿಧ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಸದ್ಯದಲ್ಲಿಯೇ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ಮೈಸೂರು ನಗರ ಪ್ರಾಧಿಕಾರದ ವಲಯ ಕಚೇರಿ -5ಬಿ ವ್ಯಾಪ್ತಿಯಲ್ಲಿನ ರಾಜೀವನಗರ ಬಡಾವಣೆಯಲ್ಲಿ ಹಲವು ವಿದ್ಯಾಸಂಸ್ಥೆ ಮತ್ತು ಭವನ, ಮೂಲಭೂತ ಸೌಕರ್ಯವುಳ್ಳ ಸ್ಥಳ ಮಂಜೂರಾತಿ ಕುರಿತು ಪ್ರಸ್ತಾಪಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಎನ್. ಆರ್.ವ್ಯಾಪ್ತಿಯಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ವಿದ್ಯಾರ್ಥಿ ನಿಲಯ, ಮಹಾರಾಣಿ ಬಾಲಕಿಯರ ಕಾಲೇಜು, ಗ್ರಂಥಾಲಯ, ಅಜೀಜ್ ಸೇಠ್ ಭವನ ನಿರ್ಮಾಣ, ಹಿಂದುಳಿದ ವರ್ಗಗಳ ಕಚೇರಿ ಸಂಕೀರ್ಣ ನಿರ್ಮಾಣ, ರೇಷ್ಮೆ ಮಾರುಕಟ್ಟೆ, ನಿರ್ಮಾಣ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಎಲ್ಲೆಲ್ಲಿ ಸರ್ಕಾರಿ ಜಾಗಗಳಿವೆ ಎಂಬುದನ್ನು ಗುರುತಿಸಿ, ಯಾವ ಯಾವ ಜಾಗಗಳು ಯಾವ ಯಾವ ಕಟ್ಟಡಗಳ ನಿರ್ಮಾಣಕ್ಕೆ ಸೂಕ್ತವಾಗಲಿದೆ ಎಂಬುದನ್ನು ಪರಿಶೀಲಿಸಿ ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.