ಮೈಸೂರು: ಪೊಲೀಸ್ ಎಂದು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನ ಕೆ.ಆರ್ ಪುರಂ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಬಂಧಿತನನ್ನು ದೇವಲಾಪುರದ ಸುಪ್ರೀತ್ ಕುಮಾರ್ ಅಲಿಯಾಸ್ ಶಿವಕುಮಾರ್ ಅಲಿಯಾಸ್ ಪ್ರೀತಂ ಎಂದು ಗುರುತಿಸಲಾಗಿದೆ.
ನಾನು ನಗರದ ಲಷ್ಕರ್ ಠಾಣೆ ಮುಖ್ಯ ಪೇದೆ ಎಂದು ಜನರಿಗೆ ಸುಳ್ಳು ಹೇಳಿ, ನನಗೆ ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಗಳು ಗೊತ್ತಿದ್ದು ಕೆಲಸ ಕೊಡಿಸುತ್ತೇನೆಂದು ಹಾಗೂ ಪೊಲೀಸ್ ಇಲಾಖೆಯಲ್ಲಿ ಜಪ್ತಿಯಾದ ವಾಹನಗಳನ್ನ ಕಡಿಮೆ ಬೆಲೆಗೆ ಕೊಡಿಸುತ್ತೇನೆಂದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಈತ ನಗರದ ನಾಲಾ ಬೀದಿಯ ಶರವಣ ಎಂಬುವರಿಗೆ ಕಡಿಮೆ ಬೆಲೆಗೆ ವಾಹನ ಕೊಡಿಸುತ್ತೇನೆಂದು ಹಣ ಪಡೆದು ವಂಚಿಸಿದ್ದ. ಈ ಬಗ್ಗೆ ಹಣ ಕಳೆದಕೊಂಡ ಶರವಣ ಕೆ.ಆರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಕೈಗೊಂಡ ಪೊಲೀಸರಿಗೆ ಆಶ್ಚರ್ಯವಾಯಿತು. ಈ ಹೆಸರಿನ ವ್ಯಕ್ತಿ ಲಷ್ಕರ್ ಠಾಣೆಯಲ್ಲಿ ಪೇದೆಯೇ ಇಲ್ಲ ಎಂದು ತಿಳಿದ ಪೊಲೀಸರು ಈತನನ್ನ ಬಂಧಿಸಿ ವಂಚನೆ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.