ಮೈಸೂರು: ಆನ್ಲೈನ್ನಲ್ಲಿ ದುಬಾರಿ ಹೆಡ್ ಪೋನ್ ಬುಕ್ ಮಾಡಿದ ಎಂಜಿನಿಯರ್ ವಿದ್ಯಾರ್ಥಿಗಳು ಹೆಡ್ ಪೋನ್ ತಲುಪಿಸಲು ಬಂದ ನೌಕರನಿಗೆ ಖಾರದಪುಡಿ ಎರಚಿ ಹೆಡ್ಪೋನ್ ಕಸಿದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಅಪ್ರಾಪ್ತ ಹಾಗೂ ನಾಲ್ವರು ಎಂಜಿನಿಯರ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸನತ್ (20), ವಿದ್ಯಾವಿಕಾಸ್ ಕಾಲೇಜಿನ ಸಿವಿಲ್ ಇಂಜಿನಿಯರ್ ವಿದ್ಯಾರ್ಥಿ ಓ.ಎಸ್.ಖಾನ್ (19), ಲಷ್ಕರ್ ಮೊಹಲ್ಲಾದ ಇಸ್ಮೈಲ್ ಖಾನ್(19) ಸೈಯದ್ ಸೈಫ್(19) ಹಾಗೂ 16 ವರ್ಷದ ಡಿಪ್ಲೊಮಾ ಮಾಡುತ್ತಿರುವ ಬಾಲಕನ ಬಂಧನ.
ಕಳೆದ ತಿಂಗಳು ಸನತ್ ಅಮೆಜಾನ್ ಆನ್ಲೈನ್ ಸೈಟ್ನಲ್ಲಿ ಸುಮಾರು 20 ಸಾವಿರ ಮೌಲ್ಯದ ಹೆಡ್ ಪೋನ್ ಬುಕ್ ಮಾಡಿದ್ದಾನೆ. ಬುಕ್ ಮಾಡಿದ ಹೆಡ್ಫೋನ್ ತಲುಪಿಸಲು ಬಂದ ನೌಕರನನ್ನು ನಿರ್ಜನ ಪ್ರದೇಶಕ್ಕೆ ಬರುವಂತೆ ಮೊಬೈಲ್ನಲ್ಲಿ ಸನತ್ ತಿಳಿಸುತ್ತಾನೆ. ಹೆಡ್ಪೋನ್ ಸಮೇತ ಮೈಸೂರಿನ ಹೊರವಲಯದ ಮಾನಸಿ ನಗರಕ್ಕೆ ನೌಕರ ಬರ್ತಾನೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ಕಾದು ಕುಳಿತಿದ್ದ ಸನತ್ ಹಾಗೂ ತಂಡ ನೌಕರನ ಕಣ್ಣಿಗೆ ಖಾರದ ಪುಡಿ ಎರಚಿ ಹೆಡ್ಪೋನ್ ಕಸಿದು ಪರಾರಿಯಾಗ್ತಾರೆ.
ಈ ಘಟನೆ ಜನವರಿ 15 ರಂದು ನಡೆದಿದ್ದು, ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಒಂದು ತಿಂಗಳ ನಂತರ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ನಾಲ್ವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತನನ್ನು ಬಾಲಮಂದಿರಕ್ಕೆ ನೀಡಲಾಗಿದೆ.