ಮೈಸೂರು: ವ್ಯಕ್ತಿಯೊಬ್ಬ ಮಾಡುತ್ತಿದ್ದ ಬ್ಲ್ಯಾಕ್ಮೇಲ್ ಗೆ ಹೆದರಿ ವಿದ್ಯಾರ್ಥಿಯೊಬ್ಬಳು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಬನ್ನೂರು ಸಮೀಪದ ತುರುಗನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ದಿ.ಉಮೇಶ್ ಮತ್ತು ಮಮತಾ ದಂಪತಿ ಪುತ್ರಿ ಚೈತ್ರಾ(20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಮಂಡ್ಯದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ.
ಈಕೆಯ ಹಿಂದೆ ಬಿದ್ದಿದ್ದ ಅದೇ ಗ್ರಾಮದ ನಿವಾಸಿ ದಾಸಪ್ಪನಾಗರಾಜು ಎಂಬುವರ ಪುತ್ರ ಟ್ರ್ಯಾಕ್ಟರ್ ರವಿ ಎಂಬಾತ ಆಗಾಗ್ಗೆ ಅಡ್ಡ ಹಾಕಿ ವಿನಾಕಾರಣ ಕಿರುಕುಳ ನೀಡುತ್ತಿದ್ದನು ಎಂದು ಹೇಳಲಾಗಿದೆ. ಈತನ ಕಿರುಕುಳ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿತ್ತಾದರೂ ಚೈತ್ರ ಅದನ್ನು ಸಹಿಸಿಕೊಂಡಿದ್ದಳು ಎನ್ನಲಾಗಿದೆ.
ಈ ನಡುವೆ ಆಕೆಯ ಕಾಲೇಜು ಬಳಿಗೆ ತೆರಳಿ ನಿನ್ನ ತಾಯಿಯ ವಿಡೀಯೋ ನನ್ನ ಬಳಿಯಿದೆ. ಅದನ್ನು ವಾಟ್ಸಪ್, ಫೇಸ್ಬುಕ್ ನಲ್ಲಿ ಹಾಕುವುದಾಗಿ ಬೆದರಿಸಿದನಲ್ಲದೆ, ಹಾಕದಂತೆ ಇರಬೇಕಾದರೆ ನಿನ್ನ ಅಮ್ಮನಿಗೆ ಹೇಳಿ ಒಂದು ಲಕ್ಷ ರೂ ಕೊಡಿಸು ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು ಎನ್ನಲಾಗಿದೆ.
ಇಷ್ಟಕ್ಕೆ ಸುಮ್ಮನಾಗದೆ ಫೆ.21ರಂದು ಮಂಗಳವಾರ ಕಾಲೇಜಿಗೆ ತೆರಳಿ ಎಲ್ಲ ವಿದ್ಯಾರ್ಥಿಗಳಿಗೆ ನಿನ್ನ ನಡವಳಿಕೆ ಬಗ್ಗೆ ಹೇಳುವುದಾಗಿಯೂ ಬೆದರಿಸಿದ್ದನು. ಇದೆಲ್ಲದರಿಂದ ನೊಂದ ಚೈತ್ರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಆಕೆಯ ತಾಯಿ ಮಮತಾ ನೀಡಿದ ದೂರಿನ ಮೇರೆಗೆ ಬನ್ನೂರು ಪಿಎಸ್ಐ ಲತೇಶಕುಮಾರ್, ವೃತ್ತ ನಿರೀಕ್ಷಕ ಮನೋಜ್ ಕುಮಾರ್ ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.