ಚಾಮರಾಜನಗರ: ಬೆಂಕಿಯ ಕೆನ್ನಾಲಗೆಗೆ ಸಿಕ್ಕಿ ಸುಟ್ಟು ಹೋದ ಮರಗಿಡಗಳು.. ಕಣ್ಣು ಹಾಯಿದಲೆಲ್ಲ ಭಸ್ಮಗೊಂಡ ಮರಗಳ ಪಳಯುಳಿಕೆಗಳು.. ಹಕ್ಕಿಗಳ ಇಂಚರವಿಲ್ಲ… ಕಾಡು ಪ್ರಾಣಿಗಳ ಸುಳಿವಿಲ್ಲ.. ಎಲ್ಲೆಡೆ ನೀರವ ಮೌನ.. ಇದು ಬಂಡೀಪುರ ಉದ್ಯಾನದಲ್ಲಿ ಕಾಣಸಿಗುತ್ತಿರುವ ಹೃದಯವಿದ್ರಾವಕ ದೃಶ್ಯಗಳು.
ಈಗಾಗಲೇ ಹರಸಾಹಸ ಮಾಡಿ ಅರಣ್ಯ ಇಲಾಖೆ ಸಿಬ್ಬಂದಿ ಕಿಡಿಗೇಡಿಗಳು ಹಚ್ಚಿದ ಬೆಂಕಿಯನ್ನು ಆರಿಸಿದ್ದಾರೆಯಾದರೂ ಯಾವಾಗ ಏನಾಗುತ್ತದೆಯೋ ಎಂಬ ಆತಂಕ ಅರಣ್ಯಾಧಿಕಾರಿಗಳು ಸೇರಿದಂತೆ ಸಿಬ್ಬಂದಿಯನ್ನು ಕಾಡುತ್ತಿದೆ.ಇವತ್ತು ಅರಣ್ಯ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಸುಟ್ಟು ನಾಶವಾಗಲು ಅರಣ್ಯದ ಬಹುತೇಕ ಕೆರೆಗಳು ನೀರಿಲ್ಲದೆ ಬರಿದಾಗಿರುವ ಪರಿಣಾಮ ಶೀಘ್ರವಾಗಿ ಬೆಂಕಿ ನಂದಿಸಲು ಸಿಬ್ಬಂದಿಗಳಿಗೆ ನೀರು ದೊರೆಯುತ್ತಿಲ್ಲ. ಹಾಗಾಗಿ ಬೆಂಕಿ ನಂದಿಸುವ ಕಾರ್ಯ ಸವಾಲಾಗಿದೆ. ಕಾಡಿನ ಹಲವಾರು ಕಡೆ ಒಂದೇ ಬಾರಿ ಬೆಂಕಿ ಬಿದ್ದಿರುವುದು ಕಾಡಿನ ಸುತ್ತಲೂ ಒಂದೆಡೆ ಬೆಂಕಿ, ಮತ್ತೊಂದೆಡೆ ಲಾಂಟನಾ ಆವರಿಸಿರುವುದರಿಂದ ಬೆಂಕಿ ಬಿದ್ದ ಸ್ಥಳಕ್ಕೆ ಶೀಘ್ರ ತೆರಳಿ ಬೆಂಕಿ ನಂದಿಸುವುದು ಕಷ್ಟವಾಗುತ್ತಿದೆ.
ಬೆಂಕಿಯು ಇಡೀ ಅರಣ್ಯ ಪ್ರದೇಶವನ್ನು ಆವರಿಸಿ ಕಾಡು ನಶಿಸುತ್ತಿರುವ ಹಿನ್ನಲೆಯಲ್ಲಿ ಆಧುನಿಕ ಸಲಕರಣೆ ಬಳಸಿ ಬೆಂಕಿ ನಂದಿಸುವುದು, ಶೀಘ್ರವಾಗಿ ಹೆಲಿಕಾಪ್ಟರ್ ಬಳಕೆ ಮಾಡಿಕೊಂಡು ಬೆಂಕಿ ನಂದಿಸುವ ಕಾರ್ಯ ಮುಂದುವರಿಸುವ ಕ್ರಮಕ್ಕೆ ಮುಂದಾಗಬೇಕಾಗಿದೆ. ಜತೆಗೆ ಬೆಂಕಿ ಆರಿಸುವ ಸಿಬ್ಬಂದಿ ಬಹುಬೇಗ ದಣಿಯುತ್ತಿರುವುದರಿಂದ ಅವರಿಗೆ ದಣಿವಾರಿಸುವಂತಹ ಪಾನೀಯಗಳನ್ನು ನೀಡುವ ವ್ಯವಸ್ಥೆ ಮಾಡಬೇಕಾಗಿದೆ.
ವಿಶ್ವದಲ್ಲಿಯೇ ಅತೀ ಹೆಚ್ಚು ಹುಲಿ ಹೊಂದಿರುವ ಅರಣ್ಯಗಳಲ್ಲಿ ಒಂದಾದ ನೀಲಗಿರಿ ಅರಣ್ಯ ಘಟ್ಟವಾದ ಬಂಡೀಪುರದಲ್ಲಿ ಸುಮಾರು 130ಕ್ಕೂ ಹೆಚ್ಚು ಹುಲಿ ಹೊಂದಿರುವ ಖ್ಯಾತಿಯನ್ನು ಪಡೆದಿದೆ. ಅಲ್ಲದೆ ವಿಶ್ವಖ್ಯಾತಿಯ ಪಕ್ಷಿಪ್ರಭೇದಗಳನ್ನು, ಪ್ರಾಣಿಸಂಕುಲಗಳನ್ನೊಳಗೊಂಡ ವಿಶೇಷವಾದ ಕಾಡುಗಳಲ್ಲಿ ಬಂಡೀಪುರ ಒಂದಾಗಿದೆ. ಪ್ರತಿವರ್ಷವೂ ಬಂಡೀಪುರ ಅರಣ್ಯಕ್ಕೆ ಬೆಂಕಿ ಬೀಳುತ್ತಲೇ ಇದೆ. ಅರಣ್ಯನಾಶವೂ ಮುಂದುವರೆಯುತ್ತಿದೆ. ಮುಂಜಾಗ್ರತಾ ಕ್ರಮ ವಹಿಸದೆ ಇರುವುದು ಮತ್ತು ಬೆಂಕಿ ನಂದಿಸಲು ಆಧುನಿಕ ಸಲಕರಣೆಯನ್ನು ಬಳಸದಿರುವುದು ಬೆಂಕಿ ಹತ್ತಿ ಅರಣ್ಯ ಉರಿಯಲು ಕಾರಣವಾಗಿದೆ. ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಬೇಕಾಗಿದೆ.