ಮೈಸೂರು: ಪ್ರೀತ್ಸೆ… ಪ್ರೀತ್ಸೆ ಅಂತಾ ಹಿಂದೆ ಬಿದ್ದ ಪಡ್ಡೆ ಹುಡುಗನ ಕಾಟದಿಂದ ಬೇಸತ್ತ ವಿದವೆಯೊಬ್ಬಳು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಘಟನೆ ನಗರದ ನರಸಿಂಹ ರಾಜಾ ಠಾಣಾ ವ್ಯಾಪ್ತಿಯ ಕುರಿಮಂಡಿಯಲ್ಲಿ ನಡೆದಿದೆ.
ಹೀಗೆ ಪಡ್ಡೆ ಹುಡುಗನ ಕಾಟದಿಂದ ನೇಣಿಗೆ ಶರಣಾದ ವಿದವೆ ಮೆಲಿನಾ (26). ಈಕೆ ಬೆಂಗಳೂರಿಗೆ ಮದುವೆಯಾಗಿದ್ದು ಮದುವೆಯಾದ 20 ದಿನಗಳಲ್ಲೆ ಗಂಡ ಹೃದಯಾಘಾತದಿಂದ ಸಾವನ್ನಪ್ಪಿದ್ದ. ನಂತರ ಮೈಸೂರಿನ ಕುರಿಮಂಡಿಯಲ್ಲಿರುವ ತವರು ಮನೆಯಲ್ಲೇ ಆಶ್ರಯ ಪಡೆದಿದ್ದು, ಲ್ಯಾಬ್ ಟೆಕ್ನೀಷಿಯನ್ ಕೋರ್ಸ್ ಓದುತ್ತಿದ್ದಳು. ಈ ಸಂಧರ್ಭದಲ್ಲಿ ಪಕ್ಕದ ಮನೆಯ ರೋಷನ್ (21) ಹುಡುಗ ಈಕೆಯನ್ನ ಪ್ರೀತಿಸುತ್ತೇನೆ ಮದುವೆಯಾಗು ಎಂದು ಪೀಡಿಸುತ್ತಿದ್ದ.
ನಿನ್ನೆ ಬೆಳಗ್ಗೆ ಮೆಲಿನಾ ಮನೆಗೆ ಬಂದು ಪ್ರೀತಿಸು ನಿನ್ನನ್ನು ಮದುವೆಯಾಗುತ್ತೇನೆ ಎಂದು ಪೀಡಿಸಿದ. ಇದನ್ನ ತಿರಸ್ಕರಿಸಿದ ಮೆಲಿನಾ ಕಾಲೇಜಿಗೆ ಬಂದಿದ್ದಳು. ಸಂಜೆ ಕಾಲೇಜಿನಿಂದ ಬಂದ ಸಂಧರ್ಭದಲ್ಲಿ ಹುಡುಗನ ಮನೆಯವರು ಇವಳ ಮನೆಗೆ ಬಂದು ನಮ್ಮ ಹುಡುಗನನ್ನ ಹಾಳು ಮಾಡುತ್ತಿದ್ದೀಯಾ ಎಂದು ಜಗಳ ಮಾಡಿ ಮೆಲಿನಾ ಮೇಲೆ ಹಲ್ಲೆ ಮಾಡಿದ್ದು, ಇದರಿಂದ ಮನನೊಂದು ನನ್ನ ಸಾವಿಗೆ ಮಮತಾ, ಲಿಲ್ಲಿ, ಪಪ್ಪಿ, ಮಲ್ಲಿಕಾ ಮತ್ತು ರಾಜ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.
ಈ ಸಂಬಂದ ಪ್ರಕರಣ ದಾಖಲಿಸಿಕೊಂಡಿರುವ ನರಸಿಂಹರಾಜಾ ಪೊಲೀಸರು ರೋಷನ್ ಸೇರಿದಂತೆ 5 ಜನರನ್ನ ಬಂದಿಸಿ ತನಿಖೆ ಕೈಗೊಂಡಿದ್ದಾರೆ.