ಮೈಸೂರು: ಮೂಲಭೂತ ಹಕ್ಕುಗಳನ್ನು ನಾಗರೀಕರು ಪಡೆದುಕೊಳ್ಳುವ ರೀತಿ ಮೂಲಭೂತ ಕರ್ತವ್ಯಗಳನ್ನು ಸಹ ಪಾಲಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಜಿ.ಎಂ. ಪಾಟೀಲ್ ಅವರು ತಿಳಿಸಿದರು.
ಅವರು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮೂಲಭೂತ ಕರ್ತವ್ಯಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಸಮಾಜದಲ್ಲಿ ಹೆಚ್ಚಿನ ಜನ ಮೂಲಭೂತ ಹಕ್ಕುಗಳನ್ನು ಪಡೆಯುತ್ತಾರೆ ಇದಕ್ಕೆಚ್ಯುತಿಯಾದರೆ ವ್ಯಾಜ್ಯಗಳನ್ನು ಹೂಡುತ್ತಾರೆ. ಮೂಲಭೂತ ಕರ್ತವ್ಯಗಳ ಪಾಲನೆಯ ಬಗ್ಗೆ ಚಿಂತಿಸುವುದೇ ಇಲ್ಲ. ಇದನ್ನು ಮನಗಂಡು 1976 ರಲ್ಲಿ ಸಂವಿಧಾನದ 42 ನೇ ತಿದ್ದುಪಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಿ ಪಾಲಿಸುವಂತೆ ತಿಳಿಸಲಾಗಿದೆ ಎಂದರು.
ಮೂಲಭೂತ ಕರ್ತವ್ಯಗಳಲ್ಲಿ ಸಂವಿಧಾನದ ಅಂಗ ಸಂಸ್ಥೆಗಳನ್ನು ಗೌರವಿಸಬೇಕು, ನಮಗೆ ಸ್ವಾತಂತ್ರ್ಯ ತಂದು ಕೊಡಲು ಶ್ರಮಿಸಿದ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಬೇಕು, ಭಾರತ ದೇಶದ ಸಾರ್ವಭೌಮತ್ವವನ್ನು ಉಳಿಸಲು ಶ್ರಮಿಸಬೇಕು, ದೇಶದ ಭದ್ರತೆಗೆ ಶ್ರಮಿಸುವುದರ ಜೊತೆಗೆ ಸೇವೆ ಸಲ್ಲಿಸಬೇಕು, ಭ್ರಾತೃತ್ವವನ್ನು ಕಾಪಾಡಬೇಕು, ದೇಶದ ಭವ್ಯ ಪರಂಪರೆ ಹಾಗೂ ಹಿರಿಮೆಯನ್ನು ಎತ್ತಿ ಹಿಡಿಯಬೇಕು, ಪರಿಸರ, ಕಾಡುಪ್ರಾಣಿ, ಅರಣ್ಯ, ಕೆರೆ, ಮುಂತಾದ ಪರಿಸರದ ಆಸ್ತಿಯನ್ನು ಸಂರಕ್ಷಿಸಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಾರ್ವಜನಿಕ ಆಸ್ತಿಯನ್ನು ಕಾಪಾಡಿ ಹಿಂಸಾಚಾರವನ್ನು ತೊಡೆದು ಹಾಕಬೇಕು. ದೇಶದ ಸರ್ವಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂಬ ಹತ್ತು ಮೂಲಭೂತ ಕರ್ತವ್ಯಗಳಿವೆ ಇವುಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಭಾರತ ಸಮೃದ್ಧ ದೇಶವಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ಹಿರಿಯ ಸಿವಿಲ್ ನ್ಯಾಯಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೊಹಮ್ಮದ್ ಮುಜೀರುಲ್ಲಾ ಅವರು ಮಾತನಾಡಿ ಸ್ವಾತಂತ್ರ್ಯಕ್ಕೂ ಮೊದಲು ಪ್ರಜೆಗಳಿಗೆ ಸರಿಯಾದ ರೀತಿಯಲ್ಲಿ ಹಕ್ಕು ದೊರಕದ ಕಾರಣ ಸಂವಿಧಾನ ರಚಿಸುವ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳಿಗೆ ಹೆಚ್ಚಿನ ಒತ್ತು ನೀಡಲಾಯಿತು. ನಂತರದ ದಿನಗಳಲ್ಲಿ ಜನಸಾಮಾನ್ಯರು ಕರ್ತವ್ಯಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಮೂಲಭೂತ ಕರ್ತವ್ಯಗಳನ್ನು ಸಂವಿಧಾನದಲ್ಲಿ ಸೇರಿಸಲಾಯಿತು. ಪ್ರತಿಯೊಬ್ಬರು ಕಾನೂನು ಪಾಲಿಸುವ ನಾಗರೀಕರಾಗಬೇಕು. ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳುವ ನಾವು ಶೇ. 10 ರಷ್ಟು ಸಹ ಮೂಲಭೂತ ಕರ್ತವ್ಯವನ್ನು ಪಾಲಿಸುತ್ತಿಲ್ಲ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗದ ಪ್ರಾಧ್ಯಾಪಕ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಕುಲಸಚಿವ ಪ್ರೊ ಸಿ.ಬಸವರಾಜು ಅವರು ಮಾತನಾಡಿ ಹಕ್ಕುಗಳ ಹಿಂದೆ ಸದಾ ಕರ್ತವ್ಯಗಳು ಇರುತ್ತದೆ ಇದನ್ನು ಮರೆಯಬಾರದು. ಕರ್ತವ್ಯಗಳನ್ನು ಸದಾ ಗೌರವಿಸಿ ಪಾಲಿಸಬೇಕು. ಮನುಷ್ಯ ದುರಾಸೆಗೆ ಬಲಿಯಾಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಕರ್ತವ್ಯಗಳನ್ನು ಸರಿಯಾಗಿ ಪಾಲಿಸಿದರೆ ಸಮಾಜದ ಅನಿಷ್ಠ ಪದ್ಧತಿಗಳನ್ನು ಸಹ ದೂರ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘ ಅಧ್ಯಕ್ಷ ರಾಮಮೂರ್ತಿ ಜಿ.ವಿ., ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಬಿ ಟಿ ವಿಜಯ್, ಪ್ರಾಧ್ಯಾಪಕರಾದ ಬಸವರಾಜು, ಭಾರತೀ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್. ಅವರುಗಳು ಉಪಸ್ಥಿತರಿದ್ದರು.