ಮೈಸೂರು: ನಗರದ ಮಾಲ್ ಆಫ್ ಮೈಸೂರಿನ ಕಟ್ಟಡ ಟೌನ್ ಪ್ಲಾನಿಂಗ್ ಸಮಿತಿಯ ನಿಯಮಗಳನ್ನು ಉಲ್ಲಂಘನೆ ಮಾಡಿರುವುದರಿಂದ ಕಟ್ಟಡದ ಅನುಮತಿ ರದ್ದು ಮಾಡಲು ಸೋಮವಾರ ಪಾಲಿಕೆಯಲ್ಲಿ ನಡೆದ ಟೌನ್ ಪ್ಲಾನಿಂಗ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಟೌನ್ ಪ್ಲಾನಿಂಗ್ ಸಮಿತಿ ಅಧ್ಯಕ್ಷ ನಂದೀಶ್ ಪ್ರೀತಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಲ್ ಆಫ್ ಮೈಸೂರಿಗೆ ಸಂಬಂಧಿಸಿದ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಮಲ್ಟಿಲೆವೆಲ್ ಪಾರ್ಕಿಂಗ್ ಮಾಡುತ್ತೇವೆ ಎಂದು ಅನುಮತಿ ಪಡೆದು ಸಿಂಗಲ್ ಲೆವೆಲ್ ಪಾರ್ಕಿಂಗ್ ನಿರ್ಮಾಣ ಮಾಡಲಾಗಿದೆ. 450 ವಾಹನಗಳಿಗೆ ಪಾರ್ಕಿಂಗ್ ಸ್ಥಳಾವಕಾಶ ಕಲ್ಪಿಸುವುದಾಗಿ ಹೇಳಿ ಕೇವಲ 150 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಶೆಲ್ಲಾರ್ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೂ ನಿಮಯವನ್ನು ಗಾಳಿಗೆ ತೂರಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದಲ್ಲದೆ ಸಾರ್ವಜನಿಕರಿಂದ ಶುಲ್ಕವನ್ನೂ ಸಂಗ್ರಹಿಸಲಾಗುತ್ತಿದೆ. ಟೌನ್ ಪ್ಲಾನಿಂಗ್ ಸಮಿತಿಯ ನಿಯಮದ ಪ್ರಕಾರ ಸರ್ಕಾರದ ಸುತ್ತೋಲೆಯಂತೆ ಶೇ.5ರಷ್ಟು ಉಲ್ಲಂಘನೆ ಮಾಡಿದರೆ ಸಿಆರ್ ರದ್ದು ಮಾಡಬಹುದು. ಆದರೆ, ಮಾಲ್ ಆಫ್ ಮೈಸೂರು ಶೇ.17ಕ್ಕಿಂತಲೂ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಸಿಆರ್ ರದ್ದು ಮಾಡಿ ಮೂರು ಪಟ್ಟು ದಂಡ ವಸೂಲಿ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
2008-09ರಲ್ಲಿ ಮಾಲ್ ಆಫ್ ಮೈಸೂರಿಗೆ ಅನುಮತಿ ನೀಡಿದ್ದು ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ಅಂದಿನ ಅಧಿಕಾರಿಗಳು ನಿಯಮವನ್ನು ಗಾಳಿಗೆ ತೂರಿ ಪ್ರಮಾಣ ಪತ್ರ ನೀಡಿದ್ದು, ಇದರ ಬಗ್ಗೆ ತನಿಖೆಯಾಗಬೇಕು. ನೀರಿನ ಬಿಲ್, ಯುಜಿಡಿ ಸೇರಿದಂತೆ 50 ಲಕ್ಷ ಬಿಲ್ ಪಾವತಿ ಮಾಡಬೇಕು. ಅಲ್ಲದೆ 18.66 ಕೋಟಿ ಬಾಕಿ ಪಾವತಿ ಮಾಡಬೇಕಿದೆ. 10 ದಿನಗಳಲ್ಲಿ ನಗರದ 9 ವಲಯಗಳಲ್ಲಿ ಅನಧಿಕೃತ ಕಟ್ಟಡಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಬೇಜವಾಬ್ದಾರಿತನದಿಂದ ಸರ್ಕಾರದ ನಷ್ಟವಾಗಿದ್ದು ಕೂಡಲೇ ಇದನ್ನು ಸರಿಪಡಿಸಿಬೇಕು ಎಂಬ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಸಮಿತಿಯ ಸದಸ್ಯರಾದ ಕೆಂಪಣ್ಣ, ಅಶ್ವಿನಿ ಅನಂತು, ಹೆಚ್ಚುವರಿ ಆಯುಕ್ತ ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.