ಮೈಸೂರು: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ 2ನೇ ಘಟಿಕೋತ್ಸವದ ಅಂಗವಾಗಿ ಸಂಗೀತ ಮತ್ತು ಪ್ರದರ್ಶಕ ಕಲೆಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ಮಂಗಳವಾರ ನಗರದ ನಿತ್ಯೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ-ಗಾಯನ ಕ್ಷೇತ್ರದಲ್ಲಿ ಪ್ರೊ.ಗೌರಿ ಕುಪ್ಪುಸ್ವಾಮಿ, ಹಿಂದೂಸ್ತಾನಿ ಸಂಗೀತ ವಾದ್ಯ ಕ್ಷೇತ್ರದಲ್ಲಿ ವಯೋಲಿನ್ ವಾದಕಿ ಪ್ರೊ.ಎನ್.ರಾಜಂ, ನಾಟಕ ಕ್ಷೇತ್ರದಲ್ಲಿ ಕಲಾವಿದ ನಾಡೋಜ ಏಣಗಿ ಬಾಳಪ್ಪ ಅವರಿಗೆ ರಾಜ್ಯಪಾಲ ವಜುಬಾಯಿ ರೂಡಾಭಾಯಿ ವಾಲಾ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.
ಇದೇ ವೇಳೆ 47 ಮಂದಿ ವಿದ್ಯಾರ್ಥಿಗಳಿಗೆ ಪದವಿ, 12 ವಿದ್ಯಾರ್ಥಿಗಳಿಂದ 18 ಚಿನ್ನದ ಪದಕ ವಿತರಿಸಲಾಯಿತು. ಗೇಯ ಸಂಗೀತ ನಿಕಾಯದಲ್ಲಿ ಅಕ್ಷತಾ ಗಜಾನನ ಹೆಗ್ಡೆ 2 ಚಿನ್ನದ ಪದಕ, ಸಂಧ್ಯಾ ಭಟ್ 3 ಚಿನ್ನದ ಪದಕ, ಕಿರಣ್ಮಯಿ ಜಿ.ವಿಠಲ್ 1 ಚಿನ್ನದ ಪದಕ, ಹರಿಲಕ್ಷ್ಮೀ 2 ಚಿನ್ನದ ಪದಕ ಹಾಗೂ 1 ನಗದು ಬಹುಮಾನ, ಪಿ.ಸುರಭಿ 1 ಚಿನ್ನದ ಪದಕ ಹಾಗೂ 1 ನಗದು ಬಹುಮಾನ, ಎಚ್.ಟಿ.ಹರೀಶ 1 ಚಿನ್ನದ ಪದಕ, ಎಸ್.ಉಷಾ 2 ಚಿನ್ನದ ಪದಕ, ಕೆ.ಆಶಾಪಾರ್ವತಿ ಭಟ್ 2 ಚಿನ್ನದ ಪದಕ, ಶ್ರೀರಂಗ ಎನ್.ಕಟ್ಟಿ 1 ನಗದು ಬಹುಮಾನ ಪಡೆದುಕೊಂಡರು.
ವಾದ್ಯ ಸಂಗೀತ ನಿಕಾಯದಲ್ಲಿ ಬಿ.ಅನಂತರಾಮ್ 1 ಚಿನ್ನದ ಪದಕ ಪಡೆದುಕೊಂಡಿದ್ದು, ನೃತ್ಯ ನಿಕಾಯದಲ್ಲಿ ಅಪೂರ್ವ ಸಮೀರ್ ರಾವ್, ನಾಗರೇಖಾ ಜಿ.ರಾವ್, ಬಿ.ಅಮೃತಾ ತಲಾ ಒಂದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಬಳಿಕ ಘಟಿಕೋತ್ಸವದ ಮುಖ್ಯ ಭಾಷಣ ಮಾಡಿದ ಪಿಟೀಲು ವಾದಕ ಎಲ್.ಸುಬ್ರಮಣಿಯಂ, ಸಂಗೀತ ಮಹಾ ವಿಶಾಲ ಸಾಗರವಿದ್ದಂತೆ. ಅದೆಲ್ಲವನ್ನು ಬಲ್ಲೆನೆಂದು ಯಾರೂ ಹೇಳಿಕೊಳ್ಳಲಾಗುವುದಿಲ್ಲ. ಸಂಗೀತವನ್ನು ಆಳವಾಗಿ ಅಧ್ಯಯನ ಮಾಡಿ ಹೆಚ್ಚೆಚ್ಚು ತಿಳಿದುಕೊಂಡಷ್ಟು ಎಷ್ಟು ಅಲ್ಪವನ್ನು ಬಲ್ಲೆನೆಂದು ತಿಳಿಸುತ್ತದೆ. ಸಂಗೀತ ಕಲಿಕೆ, ಅಭ್ಯಾಸ ನಿರಂತರ ಶೋಧ. ಅದಕ್ಕೆ ಕೊನೆಯೆಂಬುದಿಲ್ಲ. ಭಾರತೀಯ ಸಂಗೀತ ಕ್ಷೇತ್ರಕ್ಕೆ ಕರ್ನಾಟಕ ತನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಿದೆ. ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಪಂಡಿತ್ ಪುಟ್ಟರಾಜ ಗವಾಯಿ, ಪಿಟೀಲು ಚೌಡಯ್ಯ ಸೇರಿದಂತೆ ಅನೇಕ ಸಂಗೀತ ದಿಗ್ಗಜರು ಸಂಗೀತದ ಘನತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದರು.
ಪದವಿಗಳಿಸಿದ ಬಳಿಕ ನಿಜವಾದ ವೃತ್ತಿ ಜೀವನ ಆರಂಭವಾಗುತ್ತದೆ. ವಿದ್ಯಾರ್ಥಿಗಳು ಈ ಹಂತದಲ್ಲಿ ತಮ್ಮ ಬದುಕಿನ ಹಾದಿಯನ್ನು ರೂಪಿಸಿಕೊಳ್ಳಬೇಕು. ವಿಶ್ವಕ್ಕೆ ಸಂಗೀತವನ್ನು ಪರಿಚಯಿಸುವ ನೀವು ನಿಮ್ಮ ಸುತ್ತಮುತ್ತ ಪ್ರತಿನಿತ್ಯ ಘಟಿಸುವ ಘಟನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಸಂಗೀತ ಸಂಸ್ಕೃತಿಯ ಜೊತೆಗೆ ಎಲ್ಲಾ ಸಂಸ್ಕೃತಿಗಳ ಬಗೆಗೆ ಜ್ಞಾನ ಬೆಳೆಸಿಕೊಳ್ಳಬೇಕು. ಆ ಮೂಲಕ ಸಂಗೀತದ ಹಿರಿಮೆಯನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಗೀತ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳಾ ಶಂಕರ್, ಕುಲಸಚಿವ ಡಾ.ನಿರಂಜನ ವಾನಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.