ಮೈಸೂರು: 2018ರ ಸಾರ್ವತ್ರಿಕ ಚುನಾವಣೆಗೆ ಉಪಚುನಾವಣೆ ದಿಕ್ಸೂಚಿ ಎಂದ ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಈ ಉಪಚುನಾವಣೆ ಸಿದ್ದರಾಮಯ್ಯ ಅವರ ದರ್ಪ, ಧಿಮಾಕಿಗೆ ಜನರಿಂದ ಉತ್ತರ ಸಿಗಲಿದೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಉಪಚುನಾವಾಣೆಗಳು ಘೋಷಣೆಯಾದ ಮೇಲೆ ಸಿಎಂ ಸಿದ್ದರಾಮಯ್ಯ ಉಪಚುನಾವಣೆಗಳ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಅಲ್ಲ ಎಂದು ಹೇಳಿದ್ದು ಯಡಿಯೂರಪ್ಪ ಉಪಚುನಾವಣೆಗಳ ಫಲಿತಾಂಶ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದು ಹೇಳಿರುವುದು ಸರಿಯಾಗಿದೆ. ನಂಜನಗೂಡು ಹಾಗೂ ಗುಂಡ್ಲಪೇಟ್ ಉಪಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದು ಶ್ರೀನಿವಾಸ ಪ್ರಸಾದ್ ಹೇಳಿದ್ದಾರೆ.
ಜನರು ಆಲೋಚನೆ ಮಾಡಿ ಮತ ಚಲಾವಣೆ ಮಾಡಲಿದ್ದಾರೆ. ಸಿದ್ದರಾಮಯ್ಯ ಅವರ ದರ್ಪ, ಧಿಮಾಕಿಗೆ ಉತ್ತರ ಸಿಗಲಿದೆ. ಉಪಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದರ ಜೊತೆಗೆ, ಗುಂಡ್ಲುಪೇಟೆ ಕ್ಷೇತ್ರದಲ್ಲೂ ಪ್ರವಾಸ ಮಾಡುತ್ತೇನೆ. ಇಂದು ಗುಂಡ್ಲುಪೇಟೆಗೆ ತೆರಳುತ್ತಿದ್ದು, ಕಾರ್ಯಕರ್ತರ ಸಭೆ ನಡೆಸುತ್ತೇನೆ ಎಂದರು. ನಂಜನಗೂಡು ಜನರಿಗೆ ನಾನು ರಾಜೀನಾಮೆ ಕೊಟ್ಟ ಕಾರಣ ಹೇಳಿ, ಅವರ ಕ್ಷಮೆ ಕೇಳಿದ್ದೇನೆ. ಬಿಜೆಪಿಯಿಂದಲೂ ಜನ ನನ್ನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದ ಶ್ರೀನಿವಾಸ್ ಪ್ರಸಾದ್ ಚುನಾವಣೆಯು ಮುಕ್ತ ಹಾಗು ನ್ಯಾಯ ಸಮ್ಮತವಾಗಿ ನಡೆಯುವಂತೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಲಿದ್ದು, ಇದಕ್ಕಾಗಿ ಹೊರ ರಾಜ್ಯದ ಚುನಾವಣೆಯ ವೀಕ್ಷಕರನ್ನ ನೇಮಿಸಿ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದರು.