ಮೈಸೂರು: ಉತ್ತರ ಪ್ರದೇಶದಲ್ಲಿ ಚುನಾವಣೆ ಫಲಿತಾಂಶ ಯಾರು ನಿರೀಕ್ಷೆ ಮಾಡದ ಮಟ್ಟದಲ್ಲಿ ಬಂದಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್ ಸಂತಸ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದವು. ಆದರೆ ಫಲಿತಾಂಶದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನ ಪಡೆದಿದೆ ಎಂದು ಹುಡುಕಬೇಕಿದೆ. ಉತ್ತರಪ್ರದೇಶ ಚುನಾವಣೆ ಮೋದಿಗೆ ಅಗ್ನಿ ಪರೀಕ್ಷೆಯಾಗಿತ್ತು. ಅವರ ನಾಯಕತ್ವವನ್ನು ಜನ ಒಪ್ಪಿಕೊಂಡಿದ್ದಾರೆ ಎಂದು ಫಲಿತಾಂಶದಲ್ಲಿ ಸಾಬೀತಾಗಿದೆ ಎಂದು ಹೇಳಿದರು.
ಉತ್ತರಪ್ರದೇಶ ಚುನಾವಣೆ ಮೋದಿಗೆ ಅಗ್ನಿ ಪರೀಕ್ಷೆಯಾಗಿತ್ತು. ಅವರ ನಾಯಕತ್ವವನ್ನು ಜನ ಒಪ್ಪಿಕೊಂಡಿದ್ದಾರೆ ಎಂದು ಬಂದಿರುವ ಫಲಿತಾಂಶವೇ ತಿಳಿಸುತ್ತದೆ ಎಂದರು. ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ತಲೆ ಎತ್ತದಂತಾಗಿದ್ದು, ದುರ್ಬಲವಾಗಿದೆ. ರಾಹುಲ್ ಗಾಂಧಿ ಪ್ರತಿನಿಧಿಸುವ ಅಮೇಥಿ ಲೋಕಸಭಾ ಕ್ಷೇತ್ರದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ. ಉತ್ತರಪ್ರದೇಶ ಮತ್ತು ಉತ್ತರಾಖಂಡ್ ಫಲಿತಾಂಶ ಕರ್ನಾಟಕದ ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ನಂಜನಗೂಡಿನಲ್ಲಿ ಕಾಂಗ್ರೆಸ್ ನೈತಿಕವಾಗಿ ದಿವಾಳಿಯಾಗಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಕಾಂಗ್ರೆಸ್ ಭದ್ರಕೋಟೆ ಎಂದು ನೀವು ಹೇಳುತ್ತೀರಿ. ನಿಮ್ಮ ಭದ್ರಕೋಟೆಯನ್ನು ನೀವು ಹಾಗೂ ನಿಮ್ಮ ಸಚಿವ ಸಂಪುಟದೊಂದಿಗೆ ಬಂದು ಉಳಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಾಂಗ್ ನೀಡಿದರು.
ಉತ್ತರ ಪ್ರದೇಶ ಹಾಗೂ ಉತ್ತರ ಖಂಡದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ವಿರೋಧ ಪಕ್ಷದವರು ಬಿಜೆಪಿ ವಿರುದ್ಧ ಎಷ್ಟೇ ಟೀಕಿಸಿದರು ಜನರು ಮಾತ್ರ ಬೆಂಬಲ ವ್ಯಕ್ತಪಡಿಸಿರುವುದು ಈ ಚುನಾವಣೆಯ ಮೂಲಕ ಸಾಬೀತಾಗಿದೆ. ಪಂಜಾಬ್, ಗೋವಾದಲ್ಲಿ ಹೆಚ್ಚಿನ ಸ್ಥಾನ ಬಿಜೆಪಿ ಪಡೆದಿದೆ. ಆದರೇ ಆಡಳಿತ ನಡೆಸುವಷ್ಟು ಸ್ಥಾನಗಳು ಲಭ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯ ಚದುರಂಗದಾಟ ಆರಂಭವಾಗಲಿದೆ ಎಂದರು.