ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಸಚಿವರು ಹಾಗೂ ಅವರ ಹಿಂಬಾಲಕರು ಮಾಡಿರುವ ಅಧರ್ಮ, ದರೋಡೆ, ಲೂಟಿ ವಿಚಾರ ಇಟ್ಟುಕೊಂಡೆ ಚುನಾವಣೆಯನ್ನು ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ಧರ್ಮದ ಆಧಾರದ ಮೇಲೆ ಉತ್ತರ ಪ್ರದೇಶದಲ್ಲಿ ಬಿಜೆಪಿ ದಿಗ್ವಿಜಯ ಸಾಧಿಸಿದೆ. ಅದರಂತೆ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ. ಧರ್ಮದ ಆಧಾರದಕ್ಕಿಂತ ಮುಖ್ಯಮಂತ್ರಿಗಳ ಅಧರ್ಮದ ನಡೆಯೇ ನಮ್ಮ ಪ್ರಮುಖ ಅಸ್ತ್ರ. ದರೋಡೆ, ಭ್ರಷ್ಟಾಚಾರ, ಲೂಟಿ ವಿಚಾರ ಇಟ್ಟುಕೊಂಡೇ ಚುನಾವಣೆ ಎದುರಿಸಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಗುಡುಗಿದರು.
ಜನತೆಗೆ ಕಾಂಗ್ರೇಸ್ಸಿನವರು ಮಾಡಿರುವ ಮೋಸ ಹಾಗೂ ಶ್ರೀನಿವಾಸ್ ಪ್ರಸಾದ್ ರವರ ಜನಪ್ರಿಯತೆ ಬಿಜೆಪಿಗೆ ಗೆಲುವು ತಂದುಕೊಡಲಿದ್ದು, ಗುಂಡ್ಲುಪೇಟೆಯಲ್ಲಿಯೂ ನಿರಂಜನ್ ಕುಮಾರ್ ಗೆಲುವು ಸಾಧಿಸುವುದು ಖಚಿತ. ಇಂದಿನಿಂದ ಎರಡು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವುದಾಗಿ ತಿಳಿಸಿದರು.
ನಾಳೆಯಿಂದ ಶ್ರೀನಿವಾಸ್ ಪ್ರಸಾದ್ ರವರ ಪರ ಪ್ರಚಾರ ಆರಂಭಿಸಲಾದ್ದು, ಪ್ರತೀ ಗ್ರಾ.ಪಂ ಕೇಂದ್ರಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತೇವೆ. ನರೇಂದ್ರ ಮೋದಿ ಅವರ ಜನಪ್ರಿಯ ಕಾರ್ಯಕ್ರಮಗಳೇ ಚುನಾವಣೆಯ ಅಸ್ತ್ರಗಳಾಗಿದ್ದು, ಈಗಾಗಲೇ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಆಡಳಿತದ ವೈಖರಿ ಕಂಡು ರೋಸಿಹೋಗಿದ್ದಾರೆ. ರೈತ ವಿರೋಧಿ ಮುಖ್ಯಮಂತ್ರಿಗಳು ರೈತರ ಸಾಲಮನ್ನ ಮಾಡಲು ಮೀನಾಮೇಷ ಎಣಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಬರದ ಛಾಯೆ ಆವರಿಸಿದ್ದು, ಜನರು ಕುಡಿಯಲು ನೀರಿಲ್ಲದೆ ಕಂಗಾಲಾಗಿದ್ದಾರೆ. ರಾಜ್ಯ ಸರ್ಕಾರ ಜನ ಜಾನುವಾರುಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು. ದೆಹಲಿಯ ಪ್ರವಾಸದ ನಂತರ ಹದಿನೈದು ದಿನಗಳ ಕಾಲ ಗುಂಡ್ಲುಪೇಟೆ ಹಾಗೂ ನಂಜನಗೂಡಿನಲ್ಲಿ ವಾಸ್ತವ್ಯ ಹೂಡಿ ಪ್ರಚಾರ ನಡೆಸುತ್ತೇವೆ. ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಜನತೆಗೆ ತಿಳಿಸಲಾಗುವುದು ಎಂದರು.