ಮೈಸೂರು: ಯಡಿಯೂರಪ್ಪ ಮಾಡಿದ ಪಾಪದ ಕೆಲಸಗಳು ಇನ್ನೊಂದು ಬಾರಿ ಹುಟ್ಟಿಬಂದರು ಕಳೆಯಲು ಸಾಧ್ಯವಿಲ್ಲ ಅವರು ಧರ್ಮಾಧಿಕಾರಿಯೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪ ವಿರುದ್ದ ಕೆಂಡಮಂಡಲವಾದರು.
ಶಾರದದೇವಿ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಧರ್ಮದ ಆಧಾರದಲ್ಲಿ ಪ್ರಚಾರ ನಡೆಸಿ ಗೆಲುವು ಸಾಧಿಸಿದೆ ಎಂಬ ಬಿಎಸ್ ವೈ ಹೇಳಿಕೆಗೆ ತಿರುಗೇಟು ನೀಡಿದ ಅವರು ಯಡಿಯೂರಪ್ಪ ಧರ್ಮಾಧಿಕಾರಿಯೇ? ಆವರಷ್ಟು ಭ್ರಷ್ಟ ಭೂಲೋಕದಲ್ಲಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಪಂಚ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಬಜೆಟ್ ಮಂಡಿಸಬಹುದು. ಆದರೇ ಕರ್ನಾಟಕದಲ್ಲಿ ಉಪಚುನಾವಣೆ ಇರುವಾಗ ನಾವು ಬಜೆಟ್ ಮಂಡಿಸಬಾರದೇ? ಈ ಬಗ್ಗೆ ಬಿಜೆಪಿ ಅವರು ತಕರಾರು ತೆಗೆಯುತ್ತಿರುವುದು ವಿಷಾಧನೀಯ. ಬಿಜೆಪಿ ನಾಯಕರಿಗೆ ಕಾಮನ್ಸೆನ್ಸ್ ಇಲ್ಲವೇ ಎಂದು ಗುಡುಗಿದರು.
ನಂಜನಗೂಡು ಹಾಗೂ ಗುಂಡ್ಲುಪೇಟೆ ಜನತೆಗೆ ನಮ್ಮ ಸರ್ಕಾರದ ಕಾರ್ಯ ವೈಖರಿ ಹಾಗೂ ಜನೋಪಯೋಗಿ ಕಾರ್ಯಗಳ ಬಗ್ಗೆ ಅರಿವಿದೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇರುವುದರಿಂದಲೇ ಸಾಲದ ಮೇಲಿನ ಬಡ್ಡಿಯನ್ನು ಮನ್ನ ಮಾಡಲಾಗಿದ್ದು, ಬರ ನಿರ್ವಹಣೆಗೆ ಕೋಟ್ಯಾಂತರ ರೂ ನೀಡಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇವೆ. ಬಿಜೆಪಿ ಅವರಿಂದ ಯಾವುದೇ ಪಾಠ ಕಲಿಯುವ ಅಗತ್ಯವಿಲ್ಲ ಎಂದು ದೂರಿದರು.
ಸುತ್ತೂರು ಮಠಕ್ಕೆ ಭೇಟಿ
ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರಕ್ಕೆ ಚಾಲನೆ ನೀಡುವ ಮೊದಲು ಇಂದು ಬೆಳಿಗ್ಗೆ ಸುತ್ತೂರು ಮಠಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಶ್ರೀಗಳೊಂದಿಗೆ ಚರ್ಚೆ ನಡೆಸಿದರು.
ಸಾಮಾನ್ಯವಾಗಿ ಸಿದ್ದರಾಮಯ್ಯನವರು ಮಠದ ಜಾತ್ರಾ ಸಂದರ್ಭದಲ್ಲಿ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳಲ್ಲಿ ಮಾತ್ರ ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಮಾತನಾಡುತ್ತಿದ್ದರು. ಆದರೇ ಚುನಾವಣೆ ಪ್ರಕಟವಾದ ನಂತರ ಶ್ರೀಗಳೊಂದಿಗೆ ಚರ್ಚೆ ನಡೆಸಿರುವುದು ಕುತೂಹಲಕಾರಿಯಾಗಿದೆ.