ಮೈಸೂರು: ದಿನಕಳೆದಂತೆ ನಂಜನಗೂಡು ಉಪಚುನಾವಣೆ ರಂಗೇರುತ್ತಿದ್ದು ಮಾಜಿ ಸಚಿವ ದಿ.ಎಂ. ಮಹದೇವ್ ಅಲಿಯಾಸ್ ಬೆಂಕಿ ಮಹದೇವ್ ಪತ್ನಿಯನ್ನ ಸೆಳೆಯಲು ಕಾಂಗ್ರೆಸ್ ಸಚಿವರು ಅವರ ಮನೆಗೆ ಹೋಗಿ ಗುಪ್ತ ಸಮಾಲೋಚನೆ ನಡೆಸಿದ್ದಾರೆ.
ನಂಜನಗೂಡು ರಾಜಕೀಯ ಇತಿಹಾಸದಲ್ಲಿ ಶ್ರೀನಿವಾಸ್ ಪ್ರಸಾದ್ ಹಾಗೂ ದಿ. ಎಂ.ಮಹದೇವ್ ಅಲಿಯಾಸ್ ಬೆಂಕಿ ಮಹದೇವ್ ಬದ್ದ ವೈರಿಗಳು. ಈಗ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿರುವುದು ದಿ.ಎಂ ಮಹದೇವ್ ಬೆಂಬಲಿಗರು ಹಾಗೂ ಅವರ ಕುಟುಂಬದವರಿಗೆ ಅಷ್ಟೊಂದು ಇಷ್ಟವಿಲ್ಲ. ಈ ಹಿನ್ನಲ್ಲೆಯಲ್ಲಿ ಈ ವಿಚಾರವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್ ಗೂಂಡುರಾವ್ ಸಚಿವ ತನ್ವೀರ್ ಸೇಠ್ ಹಾಗೂ ವಿಧಾನ ಪರಿಷತ್ ಸದಸ್ಯ ಧರ್ಮಸೇನಾ ನಂಜನಗೂಡಿನ ದಿ.ಎಂ ಮಹದೇವ್ ಅಲಿಯಾಸ್ ಬೆಂಕಿ ಮಹದೇವ್ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ರಾಜಮ್ಮ ಅವರನ್ನ ಭೇಟಿ ಮಾಡಿ ಕಾಂಗ್ರೆಸ್ ಬರುವಂತೆ ಆಹ್ವಾನ ನೀಡಿದ್ದು ಈ ಬಗ್ಗೆ ಗುಪ್ತ ಸಮಾಲೋಚನೆ ಸಹ ನಡೆಸಿದ್ದಾರೆ ಎನ್ನಲಾಗಿದೆ.