ಎಚ್ ಡಿಕೋಟೆ: ನಾಗರಹೊಳೆ ಅಭಯಾರಣ್ಯದಿಂದ ಬಂದು ಬಾಳೆತೋಟವೊಂದರಲ್ಲಿ ಅವಿತುಕೊಂಡಿರುವ ಹುಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದು ಅದರ ಸೆರೆಗಾಗಿ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ಸಾಗುತ್ತಿರುವುದು ಇಲ್ಲಿನ ಹೆಗ್ಗಡಾಪುರ ಮತ್ತು ನಾಗನಹಳ್ಳಿಯಲ್ಲಿ ಕಂಡು ಬಂದಿದೆ.
ಹೆಗ್ಗಡಾಪುರ ಮತ್ತು ನಾಗನಹಳ್ಳಿ ನಡವೆ ಇರುವ ಜಮೀನು ಬಾಲರಾಜು, ಅಂತೋಣಿ, ಜಾನ್ ಸಹೋದರರಿಗೆ ಸೇರಿದ್ದು ಭಾನುವಾರ ಬೆಳಿಗ್ಗೆ 9 ಗಂಟೆ ಸಮಯದಲ್ಲಿ ಅಂತೋಣಿ ಪತ್ನಿ ವಿಕ್ಟೋರಿಯ ರಾಣಿ ಎಂಬುವರು ಬೆಳಿಗ್ಗೆ 9 ಗಂಟೆ ಸಮಯದಲ್ಲಿ ತೋಟದಲ್ಲಿದ್ದ ಕಾಕಡ ಹೂವನ್ನು ಕೀಳಲು ಹೋಗಿದ್ದು ಈ ವೇಳೆ ಹುಲಿ ಮಲಗಿರುವುದನ್ನು ಕಂಡು ಗಾಬರಿಯಿಂದ ಓಡಿ ಬಂದು ಮನೆಯಲ್ಲಿ ವಿಷಯ ತಿಳಿಸಿದ್ದರು.
ಇದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ಪತಿ ಅಂತೋಣಿ ಮತ್ತು ಗ್ರಾಮಸ್ಥರು ತೋಟದತ್ತ ಬಂದು ನೋಡಿದಾಗ ಹುಲಿ ಮಲಗಿದ್ದು ಕಂಡು ಬಂದಿತ್ತು. ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಮೇಟಿಕುಪ್ಪೆ ಅರಣ್ಯಾಧಿಕಾರಿಗಳು ಮಧ್ಯಾಹ್ನ 2.30ರ ವೇಳೆಯಲ್ಲಿ ಜಮೀನಿಗೆ ತೆರಳಿ ಹುಲಿಯಿರುವುದನ್ನು ಗಮನಿಸಿದ್ದಾರೆ. ಆದರೆ ಅಷ್ಟರಲ್ಲೇ ಸುದ್ದಿ ಹರಡಿ ಜನರು ಬಂದಿದ್ದು ಜನರ ಶಬ್ದಕ್ಕೆ ಹೆದರಿದ ಅದು ಪಕ್ಕದ ಬಾಳೆ ತೋಟದಲ್ಲಿ ಸೇರಿಕೊಂಡಿದೆ. ಅಷ್ಟರಲ್ಲೇ ಕಾರ್ಯಾಚರಣೆಗೆ ಮೇಟಿಕುಪ್ಪೆ, ಎಚ್.ಡಿ.ಕೋಟೆ, ಅಂತರಸಂತೆ ವಲಯಗಳಿಂದ ಸಿಬ್ಬಂದಿ ಮತ್ತು ಬೋನ್, ಬಲೆಗಳೊಂದಿಗೆ ಬಂದಿದ್ದು, ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಹುಲಿಯಿದ್ದ ಸ್ಥಳಕ್ಕೆ ಅರವಳಿಕೆ ನೀಡಲು ಪಶುವೈದ್ಯ ಡಾ.ಉಮಾಶಂಕರ್ರೊಂದಿಗೆ ಸಿಬ್ಬಂದಿ ತೆರಳಿದಾಗ ಸಿಬ್ಬಂದಿಯತ್ತ ಅದು ಧಾವಿಸಿ ಬಂದಿದೆ. ಆಗ ಸಿಬ್ಬಂದಿ ತನ್ನ ಬಳಿಯಿದ್ದ ದೊಣ್ಣೆಯಿಂದ ತಿವಿದು ಪ್ರಾಣ ರಕ್ಷಿಸಿಕೊಂಡಿದ್ದಾರೆ.
ಆ ನಂತರ ಅದು ಅಲ್ಲಿಂದ ಓಡಿ ಹೋಗಿ ಮತ್ತೊಂದು ಜಮೀನಿನ ಎತ್ತರವಾಗಿ ಬೆಳೆದಿದ್ದ ಬಾಳೆ ತೋಟದಲ್ಲಿ ಸೇರಿಕೊಂಡಿತು. ಇದೇ ರೀತಿ ಎರಡು ಬಾರಿ ಪ್ರಯತ್ನಿಸಿದಾಗಲು ಹುಲಿ ಸೆರೆ ಸಿಗದೆ ಚಳ್ಳೆಹಣ್ಣು ತಿನ್ನಿಸಿದೆ. ಅಷ್ಟರಲ್ಲೆ ಸಮಯ 6.30 ಆಗಿದ್ದರಿಂದ ಕತ್ತಲೆ ಆವರಿಸಿಕೊಂಡ ಪರಿಣಾಮ ಕಾರ್ಯಾಚರಣೆ ನಡೆಸಲು ಸಾಧ್ಯವಾಗದೆ ಸ್ಥಗಿತಗೊಳಿಸಲಾಗಿದೆ. ಸ್ಥಳದಲ್ಲೇ ಮೊಕ್ಕಾಂ ಹೂಡಿದ ತಂಡ ಇಂದು ಸಾಕಾನೆ ಅಭಿಮನ್ಯುವನ್ನು ಬಳಸಿಕೊಂಡು ಕಾರ್ಯಾಚರಣೆ ಮುಂದುವರೆಸಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಮಣಿಕಂಠನ್, ಡಿಎಫ್ಓ ಕರಿಕಾಳನ್, ವಲಯಾರಣ್ಯಾಧಿಕಾರಿ ಮಧು, ಶರಣಬಸಪ್ಪ, ಮಹೇಶ್ ಮತ್ತು ಎಸ್ಟಿಪಿಎಫ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಕ್ಷಿಪ್ರ ಕಾರ್ಯಪಡೆ ಸೇರಿದಂತೆ ನೂರಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದಾರೆ.