ಮೈಸೂರು: ಕಾನೂನು ವಿಭಾಗದ ದಲಿತ ವಿದ್ಯಾರ್ಥಿ ದುರ್ಗಾಪ್ರಸಾದ್ ಟಿ.ಎಂ.ಇವರ ಮೇಲೆ ಶಿಕ್ಷಣ ವಿಭಾಗದ ಗುಮಾಸ್ತ ಲೋಕೇಶ್ ಮಾಡಿರುವ ಹಲ್ಲೆಯನ್ನು ಖಂಡಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಿದರು.
ನಗರದ ಕ್ರಾಫರ್ಡ್ ಹಾಲ್ ಮುಂದೆ ಸಮಾವೇಶಗೊಂಡ ಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಲಿಂಗರಾಜು ಮಾತನಾಡಿ ಪದೇ ಪದೇ ದಲಿತರಿಗೆ ದೌರ್ಜನ್ಯವಾಗುತ್ತಿದೆ. ಶಿಕ್ಷಣ ಇಲಾಖೆಯ ಅರೆಕಾಲಿಕ ಗುಮಾಸ್ತನಾದ ಲೋಕೇಶ್, ಈ ಹಿಂದೆ ಕಾನೂನು ವಿಭಾಗದ ಗುಮಾಸ್ತನಾಗಿ ಕೆಲಸ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಜಾತಿ ನಿಂದನೆಯ ಆರೋಪದಿಂದ ವರ್ಗಾವಣೆಗೊಂಡಿದ್ದರು.ಈ ಹಳೆಯ ದ್ವೇಷದಿಂದ ಮೈಸೂರು ವಿವಿಯ ಆವರಣದಲ್ಲಿ ಒಂಟಿಯಾಗಿ ಇರುವುದನ್ನು ನೋಡಿ ಏಕಾಏಕಿ ವಿದ್ಯಾರ್ಥಿ ಅವಾಚ್ಯ ಶಬ್ಧಗಳನ್ನು ಬಳಸಿ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾನೆ. ಅವರನ್ನು ಈ ಕೂಡಲೇ ಕೆಲಸದಿಂದ ವಜಾಗೊಳಿಸಬೇಕು. ಮುಂದಿನ ದಿನದಲ್ಲಿ ಯಾವುದೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯದೆ ಇರುವಂತೆ ಎಲ್ಲಾ ವಿಭಾಗಗಳಿಗೂ ಸುತ್ತೋಲೆಯನ್ನು ಹೊರಡಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದ್ದಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ 30 ಜನಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು