ಮೈಸೂರು: ಗೋವಿಂದರಾಜು ಮನೆಯಲ್ಲಿ ಸಿಕ್ಕಿರುವ ಡೈರಿಯಲ್ಲಿರುವ ಅಕ್ಷರಗಳಿಗೂ ಗೋವಿಂದರಾಜು ಅವರ ಅಕ್ಷರಗಳಿಗೂ ಹೋಲಿಕೆಯಾಗುತ್ತಿಲ್ಲ ಎಂದು ವಿಧಿವಿಜ್ಞಾನ ವರದಿ ನೀಡಿರುವುದು ಮೂರ್ಖತನದ ಪರಮಾವದಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗೋವಿಂದರಾಜು ಮನೆಯಲ್ಲಿ ಸಿಕ್ಕಿರುವ ಡೈರಿ ನಕಲಿ ಎಂದು ವಿಧಿವಿಜ್ಞಾನ ಪ್ರಯೋಗಾಲಯ ವರದಿ ನೀಡಿದೆ ಎನ್ನುವುದು ಮೂರ್ಖತನದ ಪರಮಾವಧಿ. ಈ ವಿಚಾರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಲೆಬುಡವಿಲ್ಲದ ರೀತಿ ಮಾತನಾಡುತ್ತಿದ್ದಾರೆ. ಸ್ಟೀಲ್ ಬ್ರಿಡ್ಜ್ ಗುತ್ತಿಗೆ ನೀಡುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬ ಸದಸ್ಯರಿಗೆ 65 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದಿರುವುದು ಗೋವಿಂದರಾಜು ಡೈರಿಯಲ್ಲಿ ಉಲ್ಲೇಖವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯದ ಸಚಿವರು ನೂರಾರು ಕೋಟಿ ರೂಪಾಯಿ ಕಪ್ಪ ಕಾಣಿಕೆ ನೀಡಿರುವುದಾಗಿ ನಾನು ಮಾಡಿರುವ ಆರೋಪ ನೂರಕ್ಕೆ ನೂರರಷ್ಟು ಸತ್ಯ ಎಂದ ಬಿ.ಎಸ್.ಯಡಿಯೂರಪ್ಪ ಈ ಡೈರಿ ವಿಚಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ ಎಂದು ಸವಾಲು ಹಾಕಿದರು.
ನಂಜನಗೂಡು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೂಂಡಾಗಿರಿ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿನ ಭೀತಿಯ ಹತಾಶೆಯಿಂದಾಗಿ ಬಿಜೆಪಿ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ತೊಂದರೆ ಕೊಡಿಸುತ್ತಿದ್ದಾರೆ. ರಾಜ್ಯಸರ್ಕಾರ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಎರಡೂ ಕ್ಷೇತ್ರಗಳಲ್ಲೂ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಯುವುದು ಅನುಮಾನವಾಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದೇವೆ. ಕೇಂದ್ರದಿಂದ ಹೆಚ್ಚುವರಿ ಅರೆ ಮಿಲಿಟರಿ ಪಡೆಗಳನ್ನು ಎರಡೂ ಕ್ಷೇತ್ರದಲ್ಲಿ ನಿಯೋಜನೆ ಮಾಡುವಂತೆ ಕೋರಲಾಗಿದೆ ಎಂದು ಹೇಳಿದ ಯಡಿಯೂರಪ್ಪ ಹೇಳಿದರು.