ಮೈಸೂರು: ನಂಜನಗೂಡು ಉಪಚುನಾವಣೆಗೆ ಮಾಜಿ ಸಂಸದ ಹೆಚ್.ವಿಶ್ವನಾಥ್ ಪ್ರಚಾರದಿಂದ ದೂರ ಉಳಿದಿದ್ದು ಜೆಡಿಎಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಈಗ ಹಲವಾರು ಊಹಾಪೋಹಗಳಿಗೆ ಕಾರಣವಾಗಿದೆ.
ಸದಾ ಒಂದಿಲ್ಲೊಂದು ತಮ್ಮ ಪಕ್ಷದ ವಿರುದ್ದವೇ ಹೇಳಿಕೆ ನೀಡಿ ಈಗ ಪಕ್ಷದ ಕೆಂಗಣ್ಣಿಗೆ ಗುರಿಯಾಗಿರುವ ಮಾಜಿ ಸಂಸದ ಹೆಚ್.ವಿಶ್ವನಾಥ್ ನಂಜನಗೂಡು ಉಪಚುನಾವಣಾ ಪ್ರಚಾರ ಕಣದಿಂದ ದೂರ ಉಳಿದಿದ್ದು, ಕಾರಣ ಚುನಾವಣಾ ಪ್ರಚಾರ ಸಭೆಯಲ್ಲಿ ತಮ್ಮ ಭಾವಚಿತ್ರವನ್ನ ಹಾಕದೆ ಕಾಂಗ್ರೆಸ್ ನನಗೆ ಬೇಕೆಂದಲ್ಲೇ ಅವಮಾನ ಮಾಡಿದ್ದಾರೆ ಎಂದು ಮುನಿಸಿಕೊಂಡಿರುವ ವಿಶ್ವನಾಥ್, ಚುನಾವಣಾ ಪ್ರಚಾರ ಕಣದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ಖಚಿತಪಡಿಸಿವೆ.
ಜೆಡಿಎಸ್ ಸೇರ್ಪಡೆ ವದಂತಿ:
ಜೆಡಿಎಸ್ ನಲ್ಲಿದ್ದ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೆಚ್.ವಿಶ್ವನಾಥ್ ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿಯಾಗುತ್ತಿದ್ದಂತೆ ಮೂಲೆ ಗುಂಪಾಗ ತೊಡಗಿದರು. ಈ ಮದ್ಯ ಲೋಕಸಭಾ ಚುನಾವಣೆಯಲ್ಲಿ ಸೋಲನ್ನ ಅನುಭವಿಸಿದ ನಂತರ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಮೇಲೆ ಇವರನ್ನ ಕಾಂಗ್ರೆಸ್ ನಲ್ಲಿ ಕೇಳುವವರೇ ಇಲ್ಲದಂತದರು.
ಈ ಮಧ್ಯೆ ಆಸ್ಪತ್ರೆಯಿಂದ ಬಂದ ನಂತರ ಪತ್ರಿಕಾಗೋಷ್ಟಿಗಳಲ್ಲಿ ಪಕ್ಷದ ವರಿಷ್ಟರು ಸಿದ್ದರಾಮಯ್ಯ ಪರಮೇಶ್ವರ ಸೇರಿದಂತೆ ಎಲ್ಲರನ್ನು ಟೀಕಿಸ ತೊಡಗಿದರು. ಇದರಿಂದ ಕೆಪಿಸಿಸಿ ಕಾರಣ ಕೇಳಿ ಪಕ್ಷದ ಶಿಸ್ತನ್ನ ಉಲ್ಲಂಘನೆ ಮಾಡಿರುವ ವಿರುದ್ದ ನೋಟಿ ಸ್ ಜಾರಿ ಮಾಡಿದ್ದು, ನೋಟಿಸ್ ಉತ್ತರ ಸಹ ನೀಡಿದರು. ಈ ಮದ್ಯೆ ಮಾರ್ಚ್ 12 ರಂದು ನಂಜನಗೂಡಿನ ಉಪಚುನಾವಣಾ ಪ್ರಚಾರ ಸಭೆಯಲ್ಲಿ ವಿಶ್ವನಾಥ್ ಭಾವಚಿತ್ರವನ್ನ ಹಾಕದೆ ಬೇಕೆಂದಲೇ ಅವಮಾನ ಸಹ ಮಾಡಲಾಗಿದೆ ಎಂದು ಭಾವಿಸಿ ಉಪಚುನಾವಣಾ ಪ್ರಚಾರ ಕಣದಿಂದ ದೂರ ಉಳಿದಿದ್ದು, ಜೆಡಿಎಸ್ ನ ಕೆಲವು ನಾಯಕರ ಜೊತೆ ಜೆಡಿಎಸ್ ಸೇರ್ಪಡೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಜೆಡಿಎಸ್ ನ ಮಂಡ್ಯ ಜಿಲ್ಲೆಯ ಸಂಸದ ಸಿ.ಎಸ್ ಪುಟ್ಟರಾಜು ಹೇಳಿಕೆ ನೀಡಿದ್ದು, ಇದು ವಿಶ್ವನಾಥ್ ಜೆಡಿಎಸ್ ಸೇರುತ್ತಾರೆ ಎಂಬುದಕ್ಕೆ ಹಲವಾರು ಅನುಮಾನಗಳನ್ನ ಹುಟ್ಟುಹಾಕುತ್ತಿದೆ. ರಾಜಕೀಯದಲ್ಲಿ ಯಾರು ಶತ್ರುಗಳು ಅಲ್ಲ, ಯಾರು ಮಿತ್ರರು ಅಲ್ಲ ಎಂಬ ಗಾದೆ ಸತ್ಯವಾದಿತೇ? ಕಾದು ನೋಡಬೇಕಾಗಿದೆ.