News Kannada
Tuesday, February 07 2023

ಮೈಸೂರು

ಹದಗೆಟ್ಟ ಕಂಚಗಾರಕೊಪ್ಪಲು ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ!

Photo Credit :

ಹದಗೆಟ್ಟ ಕಂಚಗಾರಕೊಪ್ಪಲು ರಸ್ತೆಗಿಲ್ಲ ಅಭಿವೃದ್ಧಿ ಭಾಗ್ಯ!

ಮೈಸೂರು: ಹಳ್ಳಿಗಳು ಅಭಿವೃದ್ಧಿಯಾಗಬೇಕಾದರೆ ಅಲ್ಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಮೊದಲು ಉತ್ತಮವಾಗಿರಬೇಕು. ಇವತ್ತು ಬಹಳಷ್ಟು ಹಳ್ಳಿಗಳ ರಸ್ತೆಗಳು ಅಧೋಗತಿಯಲ್ಲಿವೆ. ಕೆಲವು ಹಳ್ಳಿಗಳಲ್ಲಿರುವ ರಸ್ತೆಗಳು ಇನ್ನೂ ಡಾಂಬರು ಕಂಡಿಲ್ಲ. ಮತ್ತೆ ಕೆಲವೆಡೆ ಹಾಕಿದ ಡಾಂಬರ್ ಕಿತ್ತು ಬಂದಿದ್ದು ಅದನ್ನು ದುರಸ್ತಿ ಮಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿ ಹಳ್ಳಿಗಳ ರಸ್ತೆಗಳಲ್ಲಿ ಸಾಗುವ ಜನರ ಬದುಕು ನಿತ್ಯ ನರಕವಾಗಿ ಪರಿಣಮಿಸುತ್ತಿದೆ.

ಇಂತಹ ನರಕದ ರಸ್ತೆಗೆ ಕೆ.ಆರ್.ನಗರ ತಾಲೂಕಿನ ಸಿದ್ದಾಪುರ ಗ್ರಾಮದಿಂದ ಕಂಚಗಾರಕೊಪ್ಪಲು ಗ್ರಾಮಕ್ಕೆ ಸಂಪರ್ಕ ರಸ್ತೆಯೊಂದು ಸಾಕ್ಷಿಯಾಗಿದೆ. ಈ ರಸ್ತೆ ದುಸ್ಥಿತಿಗೀಡಾಗಿ ದಶಕವೇ ಕಳೆದಿದ್ದರೂ ಇದಕ್ಕೆ ದುರಸ್ತಿಯ ಭಾಗ್ಯ ಕಾಣದೆ ಇರುವುದರಿಂದಾಗಿ ಇದರ ಮೇಲೆ ಸಾಗುವ ವಾಹನ ಸವಾರರು, ಪಾದಚಾರಿಗಳು ಸದಾ ಸರ್ಕಸ್ ಮಾಡಿಕೊಂಡೇ ಹೋಗುವುದು ಅನಿವಾರ್ಯವಾಗಿದೆ.

ಹಾಗೆ ನೋಡಿದರೆ ಒಂದೋ ಎರಡೋ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗದೆ, ಹತ್ತಾರು ಹಳ್ಳಿಗಳಿಗೆ ಈ ರಸ್ತೆ ಮೂಲಕ ತೆರಳಬಹುದಾಗಿದೆ. ಹೀಗಿದ್ದರೂ ದುಸ್ಥಿತಿಗೀಡಾದ ರಸ್ತೆಯನ್ನೇಕೆ ಸರಿಪಡಿಸಲು ಲೋಕೋಪಯೋಗಿ ಇಲಾಖೆಯಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಆಸಕ್ತಿ ತೋರುತ್ತಿಲ್ಲ ಎಂಬುದು ಸ್ಥಳೀಯರಿಗೆ ತೋಚದ ಸಂಗತಿಯಾಗಿದೆ.
ಕಂಚಗಾರಕೊಪ್ಪಲು ಗ್ರಾಮಸ್ಥರು ಈ ರಸ್ತೆಯ ಮೂಲಕವೇ ಕೆ.ಆರ್.ನಗರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳ ಬೇಕಾಗಿದೆ. ಹತ್ತು ವರ್ಷಗಳ ಹಿಂದೆ ರಸ್ತೆ ಚೆನ್ನಾಗಿಯೇ ಇತ್ತು. ಬಳಿಕ ಅಲ್ಲಲ್ಲಿ ಗುಂಡಿಗಳು ಕಾಣಿಸಿಕೊಂಡವು. ಡಾಂಬರು ಕಿತ್ತು ಬರತೊಡಗಿತು. ಆಗಲೇ ರಸ್ತೆಯನ್ನು ದುರಸ್ತಿ ಮಾಡಲು ಮುಂದಾಗಿದ್ದರೆ ಇಷ್ಟೊಂದು ಹದಗೆಡುತ್ತಿರಲಿಲ್ಲ. ಆದರೆ ಸಂಬಂಧಿಸಿದವರು ಇದರತ್ತ ಮನಸ್ಸು ಮಾಡಲೇ ಇಲ್ಲ. ಪರಿಣಾಮ ಇವತ್ತು ಎಲ್ಲೆಂದರಲ್ಲಿ ಗುಂಡಿಗಳು, ಜಲ್ಲಿಕಲ್ಲುಗಳು ಕಿತ್ತು ಬಂದು ರಾಶಿಬಿದ್ದಿರುವುದು ಕಂಡು ಬರುತ್ತಿದೆ. ಬೇಸಿಗೆಯಲ್ಲಿ ಈ ರಸ್ತೆಯಲ್ಲಿ ಸಾಗುವವರಿಗೆ ಧೂಳಿನ ಸಿಂಚನವಾದರೆ, ಮಳೆಗಾಲದಲ್ಲಿ ಹೊಂಡಬಿದ್ದ ರಸ್ತೆಯಲ್ಲಿ ಸಂಗ್ರಹಗೊಂಡ ನೀರಿನಿಂದ ಕೆಸರಿನ ಅಭಿಷೇಕವಾಗುತ್ತದೆ.  ಆದರೂ ಇದೆಲ್ಲವನ್ನು ಸಹಿಸಿಕೊಂಡು ಹಿಡಿಶಾಪ ಹಾಕಿಕೊಂಡೇ ಸಾರ್ವಜನಿಕರು ತೆರಳವುದು ಅನಿವಾರ್ಯವಾಗಿದೆ.

ಹಗಲು ಹೊತ್ತಿನಲ್ಲೇ ಇದರಲ್ಲಿ ಸಾಗಲು ಸಾಧ್ಯವಿಲ್ಲ ಹೀಗಿರುವಾಗ ರಾತ್ರಿ ಹೊತ್ತಲ್ಲಿ ಹೇಗೆ ಸಾಗಬೇಕು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ. ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ಇದರಿಂದ ತೊಂದರೆಯಾಗಿದೆ. ಶಾಲೆಗೆ ಹೋಗುವ ಮಕ್ಕಳು, ಕೆಲಸಕ್ಕೆ ಹೋಗುವ ದೊಡ್ಡವರು ಹೀಗೆ ಎಲ್ಲರೂ ಈ ರಸ್ತೆಯನ್ನೇ ಅವಲಂಭಿಸಬೇಕಾಗಿದೆ. ಆದ್ದರಿಂದ ದಯವಿಟ್ಟು ಈ ರಸ್ತೆಯತ್ತ ಗಮನಹರಿಸಿ ಎಂಬುದು ಸದಾ ಈ ರಸ್ತೆಯಲ್ಲೇ ಸಾಗುವ ಜನರ ಮನವಿಯಾಗಿದೆ. ಇನ್ನಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾಗಲೀ, ಸ್ಥಳೀಯ ಜನಪ್ರತಿನಿಧಿಗಳಾಗಲೀ ಇದರತ್ತ ಗಮನಹರಿಸಿ ಜನರ ಸಂಕಷ್ಟ ನಿವಾರಿಸುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

See also  ಕೊರೋನ ಅರ್ಥಿಕ ಸಂಕಷ್ಟ: ಯುವಕ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು