ಮೈಸೂರು: ನಂಜನಗೂಡು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಕಳಲೆ ಎನ್ ಕೇಶವಮೂರ್ತಿ 1.24 ಲಕ್ಷ ಮೌಲ್ಯದ ಆಸ್ತಿಹೊಂದಿದರೂ ಯಾವುದೇ ಆದಾಯ ತೆರಿಗೆ ಪಾವತಿಸಿಲ್ಲ. ಜೊತೆಗೆ ಪ್ಯಾನ್ ಕಾರ್ಡ್ ಸಹ ಹೊಂದಿಲ್ಲ ಎಂದು ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ಎರಡು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ ಕಳಲೆ ಕೇಶವಮೂರ್ತಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು ತಾಲೂಕಿನ ಕಳಲೆ ಗ್ರಾಮದ ಕಳಲೆ ಕೇಶವಮೂರ್ತಿ (60) ಅವಿವಾಹಿತರಾಗಿದ್ದು, ಇವರಿಗೆ ಯಾರು ಅವಲಂಬಿತರಾಗಿಲ್ಲ.
ಜೊತೆಗೆ ಇವರ ವಿರುದ್ದ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರಾಗಲಿ ಪ್ರಕರಣವಾಗಲಿ ದಾಖಲಾಗಿಲ್ಲ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿರುವ ಕೇಶವಮೂರ್ತಿ, 30 ಲಕ್ಷ ನಗದನ್ನ ವಿವಿಧ ಬ್ಯಾಂಕ್ ಗಳಲ್ಲಿ ಹೊಂದಿದ್ದು, ಒಂದು ಸ್ಕಾರ್ಪಿಯೋ ವಾಹನ, ನಂಜನಗೂಡು ತಾಲೂಕಿನ ಕರಳಪುರ ಗ್ರಾಮದಲ್ಲಿ 4.37 ಎಕರೆ ಕೃಷಿ ಭೂಮಿ, ಕಳಲೆ ಗ್ರಾಮದಲ್ಲಿ 100 120 ಮನೆ ಹಾಗೂ ಮೈಸೂರಿನಲ್ಲಿ 60-40 ಮನೆ ಹೊಂದಿದ್ದು ಒಟ್ಟು ಆಸ್ತಿ ಮೌಲ್ಯ 1 ಕೋಟಿ 24 ಲಕ್ಷ ಎಂದು ಚುನಾವಣಾಧಿಕಾರಿಗಳಿಗೆ ಅಫೀಡವಿಟ್ ಸಲ್ಲಿಸಿದ್ದಾರೆ. ಇವರು 1977 ರಿಂದ 80ರ ಅವದಿಯಲ್ಲಿ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಡಿಪ್ಲಮೋ ಇನ್ ಅಟೋಮೊಬೈಲ್ ವ್ಯಾಸಂಗ ಮಾಡಿದ್ದಾರೆ.
ಇನ್ನೂ ನಂಜನಗೂಡು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಒಟ್ಟು 3 ಕೋಟಿ 17 ಲಕ್ಷ ಆಸ್ತಿ ಹೊಂದಿರುವುದಾಗಿ ತಮ್ಮ ಅಫೀಡವಿಟ್ ನಲ್ಲಿ ತಿಳಿಸಿದ್ದಾರೆ. ಅಲ್ಲದೆ ನನ್ನ ಹಾಗೂ ಪತ್ನಿಯ ಹೆಸರಿನಲ್ಲಿ ಯಾವುದೇ ಕೃಷಿ ಭೂಮಿಯಿಲ್ಲ. ಯಾವುದೇ ಬ್ಯಾಂಕ್ ಗಳಲ್ಲಿ ಸಾಲ ಬಾಕಿಯನ್ನ ಉಳಿಸಿಕೊಂಡಿಲ್ಲ. ವೃತ್ತಿಯಲ್ಲಿ ಗ್ಯಾಸ್ ವಿತರಣೆ ಸ್ವಯಂ ಉದ್ಯೋಗವನ್ನಾಗಿ ಹೊಂದಿರುವ 69 ವರ್ಷದ ಶ್ರೀನಿವಾಸ್ ಪ್ರಸಾದ್ ಮೈಸೂರಿನ ಜಯಲಕ್ಷ್ಮಿಪುರಂ ನಿವಾಸಿ.
ಮೈಸೂರಿನ ವಿಶ್ವವಿದ್ಯಾನಿಯಲದಲ್ಲಿ 1987ರಲ್ಲಿ ಎಂ.ಎ ರಾಜ್ಯಶಾಸ್ತ್ರ ವಿಭಾಗದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದಾರೆ.