ಮೈಸೂರು: ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಸಿಬ್ಬಂದಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನರ ನಿದ್ದೆಗೆಡಿಸಿದ ಹುಲಿಯನ್ನು ಎಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನಹಳ್ಳಿಯಲ್ಲಿ ಸೆರೆ ಹಿಡಿಯಲಾಗಿದೆ.
ಸುಮಾರು ಎರಡು ವರ್ಷದ ಈ ಹುಲಿ ಕಳೆದ ನಾಲ್ಕು ದಿನಗಳಿಂದ ಬಾಳೆ ತೋಟ ಸೇರಿದಂತೆ ರೈತರ ಜಮೀನಿನಲ್ಲಿ ಸೇರಿಕೊಂಡು ಭಯದ ವಾತಾವರಣವನ್ನು ಸೃಷ್ಠಿ ಮಾಡಿತ್ತು. ನಾಗನಹಳ್ಳಿ, ಹೆಗ್ಗಡಾಪುರದಲ್ಲಿ ಕಾಣಿಸಿಕೊಂಡಿದ್ದ ಹುಲಿ ಕಾರ್ಯಾಚರಣೆ ನಡೆಸಿದಾಗ ಕಟ್ಟೇಮನುಗನಹಳ್ಳಿ ಗ್ರಾಮದತ್ತ ಪಲಾಯನ ಮಾಡಿತ್ತು. ಇದರ ಸುಳಿವು ದೊರೆಯದಿದ್ದಾಗ ಕಾಡಿಗೆ ಹೋಗಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿತ್ತು. ಎರಡು ಸಾಕಾನೆ ಸೇರಿದಂತೆ ನೂರಾರು ಸಿಬ್ಬಂದಿಗಳನ್ನು ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಅದರೆ ಎಲ್ಲೂ ಅದರ ಸುಳಿವು ಪತ್ತೆಯಾಗಿರಲಿಲ್ಲ.
ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆಯೇ ಕಟ್ಟೆಮನುಗನಹಳ್ಳಿಯತ್ತ ತೆರಳಿದ ಹುಲಿ ಅಲ್ಲಿನ ತಾರಕ ನದಿ ಬಳಿಯ ಕಾಡಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಚೆಲುವಯ್ಯ ಎಂಬುವವರ ಜಮೀನಿನಲ್ಲಿ ಮೇಯುತ್ತಿದ್ದ ಮೇಕೆ ಮೇಲೆ ದಾಳಿ ಮಾಡಿತ್ತು. ಅವರು ಸೇರಿದಂತೆ ಹತ್ತಿರದಲ್ಲಿದ್ದವರು ಕಿರುಚಿ ಬೊಬ್ಬೆ ಹಾಕಿದ್ದರಿಂದ ಹೆದರಿ ಮೇಕೆಯನ್ನು ಬಿಟ್ಟು ಕಾಡಿನತ್ತ ತೆರಳಿತ್ತು. ಈ ಬಗ್ಗೆ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಆರ್ ಎಫ್ಒ ಮಧು ಹಾಗೂ ಸಿಬ್ಬಂದಿ ತೆರಳಿ ಪರಿಶೀಲಿಸಿದಾಗ ಹುಲಿಯಿರುವುದು ಪತ್ತೆಯಾಗಿತ್ತು. ಅದರಂತೆ ಅಲ್ಲಿಗೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಹುಲಿ ಪತ್ತೆಯಾಯಿತು. ಕೂಡಲೇ ಅರವಳಿಕೆ ನೀಡಿ ಸೆರೆಹಿಡಿಯಲಾಗಿದ್ದು, ಬಳಿಕ ಮೃಗಾಲಯಕ್ಕೆ ಕೊಂಡೊಯ್ಯಲಾಗಿದೆ. ಕಾರ್ಯಾಚರಣೆ ವೇಳೆ ಸಿಸಿಎಫ್ ಕರಿಕಾಳನ್, ಡಾ. ಉಮಾಶಂಕರ್, ನಾಗರಾಜು, ಮದನ್ ಸೇರಿದಂತೆ ನೂರಕ್ಕೂ ಹೆಚ್ಚು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.