ಮೈಸೂರು: ಬಿ.ಪಿ.ಸಿ.ಎಲ್ ಡೀಲರ್ ಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಕುರಿತು ಜಿಲ್ಲೆಯಾಧ್ಯಂತ ಬಿ.ಪಿ.ಸಿ.ಎಲ್ ಡೀಲರ್ ಗಳು ಇಂಧನ ಖರೀದಿಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಜಮಾಯಿಸಿ ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ, ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿ ನಮ್ಮ ಸಮಸ್ಯೆಗಳನ್ನು ಬಗೆ ಹರಿಸುವಂತೆ ಬಿ.ಪಿ.ಸಿ.ಎಲ್ ಮೈಸೂರಿನ ಪ್ರಾಂತೀಯ ಕಚೇರಿಗೆ ಹಲವಾರು ಬಾರಿ ಲಿಖಿತ ಮತ್ತು ಮೌಖಿಕ ಮನವಿಗಳನ್ನು ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು. ಬ್ಯಾಂಕ್ ರಜಾ ದಿನಗಳಲ್ಲಿ ಇಂಧನ ಸರಬರಾಜಿಗೆ ಬಡ್ಡಿ ಹಾಕಲಾಗುತ್ತಿದೆ. ಬಡ್ಡಿಯನ್ನು ತೆಗೆಯಬೇಕು. ನಂಜನಗೂಡಿನ ಸಪ್ತಗಿರಿ ಸರ್ವೀಸ್ ಸ್ಟೇಷನ್ ಹಾಗೂ ಮೈಸೂರಿನ ಲಕ್ಷ್ಮಿ ಪಾಟೀಲ್ ಸರ್ವೀಸ್ ಸ್ಟೇಷನ್ ನಲ್ಲಿ ಪೈಪ್ ಲೈನ್ ದೋಷದಿಂದಾಗಿ ಡೀಸೆಲ್ ಸೋರಿಕೆಯಾಗಿದೆ ಈ ನಷ್ಟವನ್ನು ತುಂಬಿಕೊಡಬೇಕು.
ಶಿವಶಕ್ತಿ ಸರ್ವೀಸ್ ಸ್ಟೇಷನ್ ಪೆಟ್ರೋಲ್ ಟ್ಯಾಂಕಿಗೆ ನೀರು ಸೇರುತ್ತಿದ್ದು, ಇದರಿಂದ ಉಂಟಾಗಿರುವ ತೊಂದರೆಯನ್ನು ನಿವಾರಿಸಬೇಕು. ಗಿಫ್ಟ್ ವೋಚರ್ಸ್ ಮೊತ್ತವನ್ನು ಡೀಲರ್ ಗಳಿಗೆ ಹಿಂಭರ್ತಿ ಮಾಡಬೇಕು ಈ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮೈಸೂರು ಪ್ರಾಂತೀಯ ಭಾರತ್ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ನ ಕಾರ್ಯಾಧ್ಯಕ್ಷ ಎಸ್.ಗೋವಿಂದರಾಜನ್ ಸಂಘದ ಪದಾಧಿಕಾರಿಗಳಾದ ಎಸ್. ಆರ್. ಪಾಟೀಲ್, ಶ್ರೀಧರ್, ವೆಂಕಟೇಶ್, ರಂಜಿತ್ ಹೆಗಡೆ, ಭಾಗ್ಯ, ನಾರಾಯಣಸ್ವಾಮಿ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.