ಮೈಸೂರು: ಕೇಂದ್ರ ಸರ್ಕಾರದ ಹೊಸ ಬ್ಯಾಂಕ್ ವ್ಯವಹಾರದ ನೀತಿಯನ್ನು ವಿರೋಧಿಸಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ನ್ಯಾಯಾಲಯದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ ಕೇಂದ್ರ ಸರ್ಕಾರ ಇತ್ತೀಚೆಗೆ ಹೊಸ ಬ್ಯಾಂಕ್ ನೀತಿಯನ್ನು ಜಾರಿಗೆ ತಂದಿದ್ದು, ಇದರನ್ವಯ ಇನ್ನು ಮುಂದೆ ಬ್ಯಾಂಕಿನ ವ್ಯವಹಾರ ಮಾಡುವವರು ತಮ್ಮ ಖಾತೆಗೆ ಮೂರು ಬಾರಿ ಮಾತ್ರ ಜಮಾ ಹಾಗೂ ಹಣವನ್ನು ಪಡೆಯಬೇಕು. ತದ ನಂತರ ವ್ಯವಹಾರ ಮಾಡಿದರೆ ಅದಕ್ಕೆ ದಂಡ ರೂಪದಲ್ಲಿ ಶುಲ್ಕ ಕಟ್ಟಬೇಕಾಗುತ್ತದೆ ಎಂಬ ನೀತಿಯನ್ನು ಜಾರಿಗೆ ತಂದಿರುವುದರಿಂದ ಮಧ್ಯಮ ವರ್ಗದ ಜನರಿಗೆ ನುಂಗಲಾರದ ತುತ್ತಾಗಿದೆ. ಎಟಿಎಂ ಅಥವಾ ಬ್ಯಾಂಕ್ ಖಾತೆಗಳಲ್ಲಿರುವ ನಮ್ಮ ಹಣದ ವ್ಯವಹಾರವನ್ನು ಮಾಡಲು ಅನವಶ್ಯಕವಾಗಿ ದಂಡ ಕಟ್ಟುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಪ್ರಧಾನಮಂತ್ರಿಗಳು, ಕೇಂದ್ರ ಹಣಕಾಸು ಸಚಿವರು, ಆರ್ ಬಿಐ ಗವರ್ನರ್ ಮತ್ತೊಮ್ಮೆ ಪರಿಶೀಲಿಸಿ ಅವೈಜ್ಞಾನಿಕ ನೀತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಪ್ಯಾಲೇಸ್ ಬಾಬು, ಗೋಪಿ ಗುರು, ಧನಪಾಲ್, ರಾಧಾಕೃಷ್ಣ, ಶಂಕರ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.