ನಂಜನಗೂಡು: ಯಡಿಯೂರಪ್ಪ ಮತ್ತು ಶ್ರೀನಿವಾಸಪ್ರಸಾದ್ ಒಂದಾದರೆ ಏನಾಗಬಹುದು ಎಂಬುದು ಸಿದ್ಧರಾಮಯ್ಯ ಅವರಿಗೆ ಈಗ ಅರ್ಥವಾಗಿದೆ ಎಂದು ಮಾಜಿ ಸಚಿವರು ಹಾಗೂ ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ನನ್ನನ್ನು ಸಚಿವ ಸಂಪುಟದಿಂದ ಕೈ ಬಿಟ್ಟಿದ್ದೇಕೆ ಎಂಬ ನನ್ನ ಪ್ರಶ್ನೆಗೆ ಸಿದ್ಧರಾಮಯ್ಯ ಇದುವರೆಗೂ ಉತ್ತರ ನೀಡಿಲ್ಲ. ಅವರಿಗೆ ಪ್ರ್ರಾಮಾಣಿಕರು ಬೇಕಾಗಿಲ್ಲ. ಸೂಟ್ಕೇಸ್ ಗಿರಾಕಿಗಳು ಬೇಕು. ಕಾಂಗ್ರೆಸ್ ನ ಹೈಕಮಾಂಡ್ನಲ್ಲಿರುವ ಭೂತ ಪ್ರೇತಗಳಿಗೆ ಕಪ್ಪ ಸಲ್ಲಿಸುವವರು ಬೇಕಾಗಿದ್ದಾರೆ. ಹೀಗಾಗಿ ಅವರ ಸಂಪುಟದಲ್ಲಿ ಈಗಿರುವವರೆಲ್ಲಾ ಕೋಟ್ಯಧೀಶ ಮಂತ್ರಿಗಳೇ. ಅವರೆಲ್ಲರನ್ನೂ ಕರೆತಂದು ನನ್ನೆದುರು ಪ್ರಚಾರಕ್ಕಿಳಿಸಲಿದ್ದಾರೆ. ಇಂಥ ನಂಬಿಕೆ ದ್ರೋಹಿಯನ್ನು, ಉಪಕಾರ ಸ್ಮರಣೆ ಇಲ್ಲದವರನ್ನು ಬಲಿಹಾಕಲು ಸರಿಯಾದ ಸಮಯ ಬಂದಿದೆ ಎಂದು ಅವರು ಹೇಳಿದರು.
ಕಳಲೆ ಕೇಶವಮೂರ್ತಿ ಮಾಡಿದ್ದ ಸಾಲವನ್ನು ತೀರಿಸುವುದಾಗಿ ಹೇಳಿ ಅವರನ್ನು ಕರೆತಂದು ನನ್ನ ವಿರುದ್ಧ ಸ್ಪರ್ಧೆಗಿಳಿಸಿದ್ದಾರೆ. ನನಗೆ ಆದ ಅನ್ಯಾಯದ ಬಗ್ಗೆ ತಿಂಗಳುಗಟ್ಟಲೆ ನಾನು ಮಾತನಾಡಿದರೂ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಸಿದ್ಧರಾಮಯ್ಯ ಚುನಾವಣೆ ಘೋಷಣೆಯಾದ ಮೇಲೆ ಮಾತನಾಡಲು ಆರಂಭಿಸಿದ್ದಾರೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದಂಥ ರಾಜ್ಯದಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರು ಮುಖ್ಯಮಂತ್ರಿ ಯಾರೆಂಬುದನ್ನು ಬಹಿರಂಗಪಡಿಸಿರಲಿಲ್ಲ. ಆದರೆ ಕರ್ನಾಟಕದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ದೃಢ ಸರ್ಕಾರ ರಚಿಸಿ ಉತ್ತಮ ಆಡಳಿತ ನೀಡುವ ಹಂಬಲ ನಮಗೆಲ್ಲರಿಗೂ ಇದೆ. ಇದಕ್ಕಾಗಿ ಜನರು ಬೆಂಬಲಿಸುವ ಮೂಲಕ ಸಹಕಾರ ನೀಡಬೇಕು ಎಂದ ಅವರು, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ನಾವು ಸಿಡಿದು ನಿಲ್ಲುತ್ತೇವೆಂಬ ಸಂದೇಶ ಚಾಮರಾಜನಗರದಿಂದ ಬೀದರ್ ವರೆಗೂ ರವಾನೆಯಾಗಬೇಕು ಎಂದರು.
ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ತಂಜಾವೂರಿನ ಬೊಂಬೆಗಳಂತೆ ಇದ್ದಾರೆ ಎಂದು ಶ್ರೀನಿವಾಸ ಪ್ರಸಾದ್ ಟೀಕಿಸಿದರು. ಸಂಸತ್ ನಲ್ಲಿ ವಿಪಕ್ಷ ನಾಯಕರಾಗಿರುವ ಖರ್ಗೆ ಅವರು ಯಾರೇ ಮುಖ್ಯಮಂತ್ರಿಯಾದರೂ ಅಧಿಕಾರ ಪಡೆದುಕೊಳ್ಳುತ್ತಾರೆ. ಅವರು ಹೇಗೆ ಎಸೆದರೂ ನೆಟ್ಟಗೇ ನಿಲ್ಲುವ ತಂಜಾವೂರು ಬೊಂಬೆಯಿದ್ದಂತೆ ಎಂದು ವ್ಯಂಗ್ಯವಾಡಿದರು.